* ಪಶ್ಚಿಮ ಬಂಗಾಳದ ವಿಶೇಷ ಅಧಿವೇಶನಲ್ಲಿಂದು ಅತ್ಯಾಚಾರ ವಿರೋಧಿ ಮಸೂದೆ ಮಂಡನೆಗೆ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಮುಂದಾಗಿದೆ. ಈ ಮಸೂದೆಯಲ್ಲಿ ಅತ್ಯಾಚಾರದಂತಹ ಹೇಯಕೃತ್ಯ ಎಸಗುವ ಅಪರಾಧಿಗಳಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸುವ ಕುರಿತು ಉಲ್ಲೇಖಿಸಲಾಗಿದೆ. ಜೊತೆಗೆ, ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಅಪರಾಧಿಗಳಿಗೆ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆಯನ್ನೂ ಪ್ರಸ್ತಾಪಿಸಲಾಗಿದೆ. * ಅಧಿಕೃತ ದಾಖಲೆಗಳ ಪ್ರಕಾರ, ಈ ಮಸೂದೆಯು “ಅತ್ಯಾಚಾರದ ಅಪರಾಧವನ್ನು ಮಾಡುವ ಮತ್ತು ಸಾವಿಗೆ ಕಾರಣವಾಗುವ ಅಥವಾ ಮಹಿಳೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿರುವಂತೆ ಮಾಡುವ ವ್ಯಕ್ತಿಗಳಿಗೆ" ಮರಣದಂಡನೆ ಶಿಕ್ಷೆ ನೀಡಲು ಪ್ರಯತ್ನಿಸುತ್ತದೆ.* ಅಪರಜಿತಾ ಮಹಿಳಾ ಮತ್ತು ಮಕ್ಕಳ ಮಸೂದೆ (ಪಶ್ಚಿಮ ಬಂಗಾಳ ಅಪರಾಧ ಕಾನೂನು ಮತ್ತು ತಿದ್ದುಪಡಿ) ಮಸೂದೆ 2024ರ ಶೀರ್ಷಿಕೆಯಡಿ ಈ ಮಸೂದೆಯನ್ನು ಮಂಡಿಸಲಾಗುತ್ತಿದೆ. ಈ ಮೂಲಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಹೊಸ ನಿಬಂಧನೆಯನ್ನು ಪರಿಷ್ಕರಿಸಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ಕಾನೂನನ್ನು ರಾಜ್ಯದಲ್ಲಿ ಬಲಗೊಳಿಸಲಾಗುತ್ತಿದೆ.* ದೇಶದೆಲ್ಲೆಡೆ ಭಾರಿ ಆಕ್ರೋಶಕ್ಕೆ ಗುರಿಯಾಗಿರುವ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬೆನ್ನಲ್ಲೇ ಸರ್ಕಾರ ಈ ಮಸೂದೆ ತಂದಿದ್ದು, ಸೋಮವಾರದಿಂದ ಎರಡು ದಿನ ವಿಶೇಷ ಅಧಿವೇಶನ ಕರೆದಿದೆ. ಇಂದು ಮಸೂದೆಯನ್ನು ರಾಜ್ಯ ಕಾನೂನು ಸಚಿವ ಮೊಲೊಯ್ ಘಾಟಕ್ ಅವರು ಸದನದಲ್ಲಿ ಮಂಡಿಸಲಿದ್ದಾರೆ. * ಉದ್ದೇಶಿತ ಮಸೂದೆ ಇತ್ತೀಚಿಗೆ ಜಾರಿಗೆ ತರಲಾಗಿರುವ ಭಾರತೀಯ ನ್ಯಾಯ ಸಂಹಿತಾ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಹಾಗೂ 2023 ಕಾನೂನುಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ 2012 ಗೆ ತಿದ್ದುಪಡಿ ಪ್ರಸ್ತಾವನೆಗಳನ್ನು ಹೊಂದಿದೆ.