* ಪ್ರಪಂಚದಲ್ಲಿ ಬೇರೆಲ್ಲೂ ಕಾಣದ 'ಕ್ರೋಟಲೇರಿಯಾ ಸಂಡೂರೆನ್ಸಿಸ್' ಎಂಬ ಗಿಡ ಬಳ್ಳಾರಿ ಜಿಲ್ಲೆಯ ಸಂಡೂರಿನ ರಾಮಗಡ ಶ್ರೇಣಿಯಲ್ಲಿ ಪತ್ತೆಯಾಗಿದೆ.* ಸಮುದ್ರ ಮಟ್ಟದಿಂದ 1000 ಮೀಟ‌ರ್ ಎತ್ತರದಲ್ಲಿ ಮಾತ್ರ ಬೆಳೆಯುವ ಈ ಗಿಡಗಳನ್ನು 1912ರಲ್ಲಿ ಜೆ. ಎಸ್‌. ಗ್ಯಾಂಬೆಲ್ ಎಂಬ ಯೂರೋಪಿನ ಸಸ್ಯಶಾಸ್ತ್ರಜ್ಞ ರಾಮಗಡದ ಪರ್ವತದಲ್ಲಿ ಮೊದಲ ಬಾರಿಗೆ ಪತ್ತೆ ಹಚ್ಚಿದ್ದರು.* ಈ ಪರ್ವತ ಶ್ರೇಣಿ ಸಮುದ್ರಮಟ್ಟದಿಂದ ಒಂದು ಸಾವಿರ ಮೀಟರ್ ಎತ್ತರಕ್ಕೆ ಇರುವ ಕಾರಣ ಇಲ್ಲಿ ಅಪರೂಪದ ಜೀವ ವೈವಿಧ್ಯತೆ ವಿಕಸನಗೊಂಡಿದೆ. ಅದರಲ್ಲೂ ಇಡೀ ಜಗತ್ತಿನಲ್ಲಿ ಎಲ್ಲೂ ಕಾಣದ ಸಸ್ಯ ಕ್ರೋಟಲೇರಿಯಾ ಸಂಡೂರೆನ್ಸಿಸ್ (Crotalaria sandoorensis) ಕೇವಲ ರಾಮಗಡ ಬೆಟ್ಟದಲ್ಲಿ ಮಾತ್ರ ಬೆಳೆಯುತ್ತಿದೆ ಎಂದು ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ತಿಳಿಸಿದ್ದಾರೆ.* "ಈ ಸಸ್ಯದ ಬೀಜಗಳನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ ಕಾಡಿನಲ್ಲಿ ಬೆಳೆಸುವ ಪ್ರಯೋಗ ಮಾಡಿದರು ಆದರೆ ಅಲ್ಲಿ ಬೆಳೆಯಲಿಲ್ಲ. ಇದಕ್ಕೆ ಸಮುದ್ರ ಮಟ್ಟದಿಂದ ಎತ್ತರ ಹಾಗೂ ಕಬ್ಬಿಣ-ಮ್ಯಾಂಗನೀಸ್ ಅದಿರು ಇರುವ ಮಣ್ಣು ಕಾರಣ ಇರಬಹುದು.* "ಹೊಳಪಿನ ಸೂಕ್ಷ್ಮರೋಮಗಳಿಂದ ಕೂಡಿದ ಎಲೆ, ಹಳದಿ ಹೂವು, ಬುರುಡೆಯಂತೆ ಇರುವ ಕಾಯಿ, ಹುರುಳಿಯಾಕಾರದ ಬೀಜಗಳನ್ನು ಬಿಡುವ ಈ ಸಸ್ಯ ಸೆಣಬಿನ ವರ್ಗಕ್ಕೆ ಸೇರಿದೆ.* ಈ ಸಸ್ಯಕ್ಕೆ ಕನ್ನಡದಲ್ಲಿ ಹೆಸರಿಲ್ಲ. ರಾಮಗಡದಲ್ಲಿ ಮಾತ್ರ ಸಿಗುವ ಕಾರಣ ಇದಕ್ಕೆ 'ರಾಮ ಸೆಣಬು' ಎನ್ನಲಾಗಿದೆ.* ಈ ಸಸ್ಯ ಕೇವಲ ರಾಮಗಡದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದೆ. ಆದರೆ ಗಣಿಗಾರಿಕೆಯಿಂದ ಈ ಅಪರೂಪದ ಸಸ್ಯದ ಅಸ್ತಿತ್ವಕ್ಕೆ ಧಕ್ಕೆ ಎದುರಾಗಿದೆ. ಆದ್ದರಿಂದ ಈ ಸಸ್ಯದ ಕುರಿತು ಸುದೀರ್ಘ ಅಧ್ಯಯನ ಮಾಡುವುದು ಹಾಗೂ ಸಂಡೂರಿನ ಅಪರೂಪದ ಜೀವ ವೈವಿಧ್ಯತೆಯನ್ನು ಕಾಪಾಡಬೇಕಾದುದು ನಮ್ಮ ಜವಾಬ್ದಾರಿಯಾಗಿದೆ ಎಂದು ಡಾ.ಸಮದ್ ಕೊಟ್ಟೂರು ತಿಳಿಸಿದರು.