* ಈಶಾನ್ಯ ರಾಜ್ಯದ ನಗರವೊಂದರ ಹೆಸರು ಹೊಂದಿರುವ ಭಾರತದ ಮೊಟ್ಟಮೊದಲ ಸ್ವದೇಶಿ ನಿರ್ಮಿತ 'ಐಎನ್‌ಎಸ್ ಇಂಫಾಲ್‌' ಯುದ್ಧನೌಕೆಯನ್ನು ಡಿಸೆಂಬರ್ 26 ರಂದು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಗುವುದು.* ಸಾಗರ ಸೀಮೆಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವ ಚೀನಾಕ್ಕೆ ಪ್ರತಿರೋಧ ಒಡ್ಡುವ ಸಲುವಾಗಿ ರೂಪಿಸಿರುವ ಈ ಯುದ್ಧನೌಕೆಯನ್ನು ಮುಂಬೈನಲ್ಲಿರುವ ನೌಕಾಪಡೆಯ ಪಶ್ಚಿಮ ಕಮಾಂಡ್‌ಗೆ ಹಸ್ತಾಂತರಿಸಲಾಗುತ್ತದೆ.* ನಾಲ್ಕು ‘ವಿಶಾಖಪಟ್ಟಣಂ ’ವರ್ಗದ ವಿನಾಶಕ ಯುದ್ಧನೌಕೆಗಳ ಪೈಕಿ 'ಐಎನ್ಎಸ್ ಇಂಫಾಲ್' ನೌಕಾಪಡೆಗೆ ವಿಧ್ಯುಕ್ತವಾಗಿ ಸೇರ್ಪಡೆಗೊಳ್ಳುತ್ತಿರುವ ಮೂರನೆಯ ಸ್ವದೇಶಿ ನಿರ್ಮಿತ ಹಡಗು ಆಗಿದೆ. ಭಾರತೀಯ ನೌಕಾಪಡೆಯ ವಾರ್ಶಿಪ್ ಡಿಸೈನ್ ಬ್ಯೂರೊ ವಿನ್ಯಾಸಗೊಳಿಸಿದ ನೌಕೆಯು ಮುಂಬೈನ ಮಜಗಾಂವ್ ಡಾಕ್ ಲಿಮಿಟೆಡ್ ನಲ್ಲಿ ನಿರ್ಮಾಣಗೊಂಡಿದೆ.* 'ಮಣಿಪುರ ಮತ್ತು ಅಲ್ಲಿನ ಇಂಫಾಲ್‌ ನಗರವು ದೇಶದ ರಕ್ಷಣೆ, ಸಾರ್ವಭೌಮತೆ ಮತ್ತು ಸುಸ್ಥಿರತೆಗೆ ಮಹತ್ವದ ಕೊಡುಗೆ ನೀಡಿರುವ ಹಿನ್ನೆಲೆಯಲ್ಲಿ ದೇಶದ ಯುದ್ಧನೌಕೆಯೊಂದಕ್ಕೆ ಅದರ ಹೆಸರು ಇಡಲಾಗಿದೆ' ಎಂದು ಸೇನೆ ತಿಳಿಸಿದೆ.'ಐಎನ್‌ಎಸ್ ಇಂಫಾಲ್' ಯುದ್ಧನೌಕೆಯ ವಿಶೇಷತೆ:- ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸ್ಥಳೀಯವಾಗಿ ನಿರ್ಮಾಣ- ವಿಶ್ವದ ಅತ್ಯುತ್ತಮ ಯುದ್ಧನೌಕೆಗಳ ಸಾಲಿಗೆ ಸೇರ್ಪಡೆ.- ಭಾರತದಲ್ಲಿ ನಿರ್ಮಾಣವಾದ ಮೂರನೇ ಕ್ಷಿಪಣಿ ನಾಶಕ ಯುದ್ಧನೌಕೆ.- ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸೆನ್ಸಾರ್‌ಗಳು, ರೆಡಾರ್‌ಗಳನ್ನು ಹೊಂದಿದೆ.- ಭೂಮಿಯಿಂದ ಭೂಮಿಗೆ, ಭೂಮಿಯಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಗಳು ನೌಕೆಯ ಬತ್ತಳಿಕೆಯಲ್ಲಿರಲಿವೆ.- ಮಜಗಾಂವ್‌ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ (ಎಮ್‌ಡಿಎಲ್) ಈ ನೌಕೆಯನ್ನು ನಿರ್ಮಿಸಿದೆ.