Job Description: ➤ ಪ್ರತಿ ವರ್ಷ ಜೂನ್ 19 ರಂದು ಜಾಗತಿಕವಾಗಿ "ವಿಶ್ವ ಸಿಕಲ್ ಸೆಲ್ ದಿನ" (World Sickle Cell Day) ವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 2008 ರಲ್ಲಿ ಅಂಗೀಕರಿಸಿದ ನಿರ್ಣಯದ ಅನ್ವಯ 2009 ರಿಂದ ಮೊದಲ ಬಾರಿಗೆ "ವಿಶ್ವ ಸಿಕಲ್ ಸೆಲ್ ದಿನ"ವನ್ನು ಆಚರಿಸಲಾಗುತ್ತಿದ್ದು, ಭಾರತ ಸರ್ಕಾರವು 2047ರ ವೇಳೆಗೆ ದೇಶದಿಂದ ಈ ಕಾಯಿಲೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಮಹತ್ತರ ಗುರಿಯನ್ನು ಹೊಂದಿದೆ.➤ 2026ರ ಘೋಷವಾಕ್ಯ (Theme): ಬದುಕುಳಿಯುವಿಕೆಯ ಅಂತರವನ್ನು ಕಡಿಮೆ ಮಾಡುವುದು: ಸಿಕಲ್ ಸೆಲ್ ಕಾಯಿಲೆಯಲ್ಲಿ ಸಮಾನತೆ. (Closing the Survival Gap: Equity in Sickle Cell Disease)➤ ಸಿಕಲ್ ಸೆಲ್ ಕಾಯಿಲೆ ಎಂದರೆ ಪೋಷಕರಿಂದ ಮಕ್ಕಳಿಗೆ ಹರಡುವ ಒಂದು ಅನುವಂಶಿಕ ರಕ್ತದ ಸಮಸ್ಯೆಯಾಗಿದ್ದು, ಇದರಲ್ಲಿ ಕೆಂಪು ರಕ್ತಕಣಗಳು ಕುಡುಗೋಲಿನ ಆಕಾರಕ್ಕೆ ತಿರುಗಿ ರಕ್ತನಾಳಗಳಲ್ಲಿ ಆಮ್ಲಜನಕದ ಸುಗಮ ಹರಿವನ್ನು ತಡೆಯುತ್ತವೆ.➤ ಪ್ರಮುಖ ಲಕ್ಷಣಗಳು (Symptoms): ತೀವ್ರ ರಕ್ತಹೀನತೆ (Chronic Anemia): ಸಾಮಾನ್ಯ ರಕ್ತಕಣಗಳು 120 ದಿನ ಬದುಕಿದರೆ, ಕುಡುಗೋಲು ಕಣಗಳು ಕೇವಲ 10 ರಿಂದ 20 ದಿನಗಳಲ್ಲಿ ನಾಶವಾಗುತ್ತವೆ. ಇದರಿಂದ ದೇಹದಲ್ಲಿ ರಕ್ತದ ಕೊರತೆ ಉಂಟಾಗುತ್ತದೆ. ಅತಿಯಾದ ಆಯಾಸ ಮತ್ತು ನಿಶ್ಯಕ್ತಿ: ಆಮ್ಲಜನಕದ ಪೂರೈಕೆ ಕಡಿಮೆಯಾಗುವುದರಿಂದ ದೇಹ ಸದಾ ಸುಸ್ತಾಗಿರುತ್ತದೆ. ದೇಹದ ಭಾಗಗಳಲ್ಲಿ ತೀವ್ರ ನೋವು (Pain Crises): ರಕ್ತನಾಳಗಳು ಬ್ಲಾಕ್ ಆಗುವುದರಿಂದ ಕೈಕಾಲುಗಳು, ಎದೆ ಮತ್ತು ಕೀಲುಗಳಲ್ಲಿ ಅಸಹನೀಯ ನೋವು ಕಾಣಿಸಿಕೊಳ್ಳುತ್ತದೆ. ಕಾಮಾಲೆ (Jaundice): ಕೆಂಪು ರಕ್ತಕಣಗಳು ವೇಗವಾಗಿ ನಾಶವಾಗುವುದರಿಂದ ಕಣ್ಣು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತವೆ. ಸೋಂಕಿನ ಅಪಾಯ: ಪ್ಲೇಹ (Spleen) ಅಂಗಕ್ಕೆ ಹಾನಿಯಾಗುವುದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಪದೇ ಪದೇ ಸೋಂಕುಗಳು ತಗುಲುತ್ತವೆ. ➤ ಭಾರತದಲ್ಲಿ ಸಿಕಲ್ ಸೆಲ್ ಕಾಯಿಲೆಯ ಸ್ಥಿತಿ: ವಿಶ್ವದಲ್ಲೇ ಸಿಕಲ್ ಸೆಲ್ ಕಾಯಿಲೆಯ ಅತಿ ಹೆಚ್ಚು ಹೊರೆ ಹೊಂದಿರುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ವಿಶೇಷವಾಗಿ ಈ ಕೆಳಗಿನ ರಾಜ್ಯಗಳ ಬುಡಕಟ್ಟು (Tribal) ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ: ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಢ, ಒಡಿಶಾ, ರಾಜಸ್ಥಾನ, ಜಾರ್ಖಂಡ್, ಆಂಧ್ರಪ್ರದೇಶ ಮತ್ತು ತೆಲಂಗಾಣ.➤ ಭಾರತ ಸರ್ಕಾರದ ಪ್ರಮುಖ ಕ್ರಮಗಳು ಮತ್ತು ಉಪಕ್ರಮಗಳು: ರಾಷ್ಟ್ರೀಯ ಸಿಕಲ್ ಸೆಲ್ ಅನಿಮಿಯಾ ನಿರ್ಮೂಲನಾ ಮಿಷನ್ (National Sickle Cell Anaemia Elimination Mission):ಇದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2023 ರಲ್ಲಿ ಚಾಲನೆಗೊಳಿಸಿದರು. ಇದರ ಪ್ರಮುಖ ಗುರಿ 2047 ರ ವೇಳೆಗೆ ಭಾರತದಿಂದ ಸಿಕಲ್ ಸೆಲ್ ಕಾಯಿಲೆಯನ್ನು ಸಂಪೂರ್ಣವಾಗಿ ಮುಕ್ತಗೊಳಿಸುವುದಾಗಿದೆ. ಬೃಹತ್ ಸ್ಕ್ರೀನಿಂಗ್ ಕಾರ್ಯಕ್ರಮ (Mass Screening): ದೇಶದ ಬುಡಕಟ್ಟು ಜನಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ 0 ಯಿಂದ 40 ವರ್ಷದೊಳಗಿನ ಸುಮಾರು 7 ಕೋಟಿ ಜನರನ್ನು ಪರೀಕ್ಷಿಸುವ ಗುರಿ ಹೊಂದಲಾಗಿದೆ. ಸಿಕಲ್ ಸೆಲ್ ಹೆಲ್ತ್ ಕಾರ್ಡ್ಸ್ (Sickle Cell Health Cards): ತಪಾಸಣೆಯ ನಂತರ ಬಾಧಿತರಿಗೆ ಮತ್ತು ವಾಹಕರಿಗೆ (Carriers) ವಿಶೇಷ ಹೆಲ್ತ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಇದು ಮದುವೆಯ ಮುನ್ನ ಜೆನೆಟಿಕ್ ಕೌನ್ಸಿಲಿಂಗ್ ಪಡೆಯಲು ಮತ್ತು ಮುಂದಿನ ಪೀಳಿಗೆಗೆ ಕಾಯಿಲೆ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ. ಆರೋಗ್ಯ ಮೂಲಸೌಕರ್ಯ ಬಲವರ್ಧನೆ: ಜಿಲ್ಲಾ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHCs) ಉಚಿತ ರಕ್ತ ತಪಾಸಣೆ (HPLC ಟೆಸ್ಟ್) ಮತ್ತು ಉಚಿತ ಔಷಧಿಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ