* ಆತಂಕಕಾರಿ ಮಟ್ಟದಲ್ಲಿ ದೆಹಲಿಯ ವಾಯು ಮಾಲಿನ್ಯ ಏರಿಕೆಯಾಗುತ್ತಿರುವುದನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮಗಳ ಅನುಷ್ಠಾನದಲ್ಲಿ ವಿಳಂಬವನ್ನು ಗಮನಿಸಿರುವ ಸುಪ್ರೀಂ ಕೋರ್ಟ್, GRAP 4 ನಿರ್ಬಂಧಗಳನ್ನು ಜಾರಿಗೊಳಿಸಲು ತಕ್ಷಣವೇ ತಂಡಗಳನ್ನು ಸ್ಥಾಪಿಸುವಂತೆ ದೆಹಲಿ-ಎನ್‌ಸಿಆರ್ ರಾಜ್ಯಗಳಿಗೆ ಸೂಚಿಸಿದೆ.* ಈ ನಿರ್ಬಂಧಗಳು ವಾಯುಗುಣಮಟ್ಟ 450 ಕ್ಕಿಂತಲೂ ಕಡಿಮೆ ಇದ್ದರೂ ಸಹ ಜಾರಿಯಲ್ಲಿರಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.* ದೇಶದ ರಾಜಧಾನಿ ದೆಹಲಿಯ ವಾಯು ಗುಣಮಟ್ಟ ಸೋಮವಾರ (ನವೆಂಬರ್ 18) ಇನ್ನಷ್ಟು ಹದಗೆಟ್ಟಿದ್ದು, ವಾಯುಗುಣಮಟ್ಟ ಸುಂಚ್ಯಂಕವು (AQI) 484 ಕ್ಕೆ ತಲುಪಿದೆ.* ಸೋಮವಾರದಿಂದ GRAP 4ನೇ ಹಂತವನ್ನು ಜಾರಿಗೆ ತರಲಾಗಿದ್ದು, ಭಾರೀ ವಾಹನಗಳನ್ನು ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ದೆಹಲಿ ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ.*  ಈ ರೀತಿ AQI ಸನ್ನಿವೇಶದಲ್ಲಿ ಗಾಳಿಯು ಆರೋಗ್ಯಕ್ಕೆ ಹಾನಿ ಉಂಟುಮಾಡುವಂಥದ್ದು ಎಂದು ಪರಿಗಣಿಸಲಾಗುತ್ತದೆ. ಇದು ವಿಶೇಷವಾಗಿ ಮಕ್ಕಳು, ವಯೋವೃದ್ಧರು ಮತ್ತು ಉಸಿರಾಟ, ಹೃದಯದ ಸಮಸ್ಯೆ ಇರುವಂಥವರಿಗೆ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ಎಎನ್‌ಐ ವರದಿ ಮಾಡಿದೆ.* ದಟ್ಟವಾದ ಹೊಗೆ ಆವರಿಸಿದ್ದರಿಂದ ಗೋಚರತೆ ಸಮಸ್ಯೆ ಎದುರಾಗಿ ಹಲವಾರು ರೈಲುಗಳು ಮತ್ತು ವಿಮಾನಗಳ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಕನಿಷ್ಠ 22 ರೈಲುಗಳ ಸಂಚಾರ ತಡವಾಗಿದ್ದು, 8 ವಿಮಾನಗಳ ಲ್ಯಾಂಡಿಂಗ್ ಸ್ಥಳವನ್ನು ಬದಲಾಯಿಸಲಾಗಿದೆ.* ತೀವ್ರ ವಾಯುಮಾಲಿನ್ಯ ಮತ್ತು ಅಪಾಯಕಾರಿ ಎಕ್ಯೂಐ ಮಟ್ಟದಿಂದಾಗಿ ದಿಲ್ಲಿಯಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ. 12ನೇ ತರಗತಿವರೆಗಿನ ಎಲ್ಲಾ ಅಧ್ಯಯನಗಳನ್ನು ಆನ್‌ ಲೈನ್‌ ಗೆ ವರ್ಗಾಯಿಸಲಾಗುತ್ತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅತಿಶಿ ಹೇಳಿದ್ದಾರೆ.* ಈ ಮಧ್ಯೆ ದಿಲ್ಲಿ ವಿಶ್ವವಿದ್ಯಾನಿಲಯವು ನವೆಂಬರ್ 23ರವರೆಗೆ ಆನ್ಲೈನ್ ತರಗತಿಗಳನ್ನು ನಡೆಸುವುದಾಗಿ ಘೋಷಿಸಿದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು ನವೆಂಬರ್ 22ರವರೆಗೆ ಆನ್‌ ಲೈನ್ ತರಗತಿಗಳನ್ನು ಮಾಡುವುದಾಗಿ ಹೇಳಿಕೊಂಡಿದೆ.