* ರಾಜ್ಯದಲ್ಲಿ ಮಾದಕ ವಸ್ತು (ಡ್ರಗ್ಸ್) ಪೂರೈಕೆ ಮತ್ತು ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲು ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ.* ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಸಚಿವರನ್ನೊಳಗೊಂಡ ಕಾರ್ಯಪಡೆ ರಚನೆಯನ್ನು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದು ಸಾಮಾಜಿಕ ಪಿಡುಗನ್ನು ತೊಡೆದುಹಾಕಲು ಎಲ್ಲಾ ರೀತಿಯ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.* ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕ‌ರ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.* ಮಾದಕ ವಸ್ತು ಜಾಲದ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ಶೇ. 50 ರಷ್ಟು ಬೆಂಗಳೂರು ಹಾಗೂ ಶೇ. 22ರಷ್ಟು ಮಂಗಳೂರಿನಲ್ಲಿ ವರದಿಯಾಗಿದೆ. ಉಳಿದ ಶೇ. 28 ರಷ್ಟು ಪ್ರಕರಣಗಳು ರಾಜ್ಯದ ಇತರೆ ಜಿಲ್ಲೆಗಳಲ್ಲಿ ದಾಖಲಾಗಿವೆ. ಬೆಂಗಳೂರು ಪೂರ್ವ ವಲಯ ದಂಧೆಯ ತಾಣವಾಗಿದೆ ಎಂದು ಮಾಹಿತಿ ನೀಡಿದರು.* ಈ ಮಾದಕ ಜಾಲದಲ್ಲಿ ತೊಡಗಿಸಿಕೊಂಡಿರುವವರಲ್ಲಿ ಭಾರತೀಯರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ವಿದೇಶಿರ ಸಂಖ್ಯೆ ಕಡಿಮೆ ಇದೆ. 2023 ರಲ್ಲಿ 8542 ಭಾರತೀಯರು, 106 ವಿದೇಶಿಯರನ್ನು ಬಂಧಿಸಲಾಗಿತ್ತು.* ಅಗತ್ಯ ಬಿದ್ದರೆ ಕಾನೂನಿಗೆ ತಿದ್ದುಪಡಿ ತರಲಾಗುವುದು. ಈ ಜಾಲದಲ್ಲಿ ತೊಡಗಿಕೊಂಡವರಿಗೆ  ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಮಾನ ಶಿಕ್ಷೆ ನಿಗದಿ ಮಾಡಲು ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.