Job Description: ➤ ದ್ವಿಪಕ್ಷೀಯ ವ್ಯಾಪಾರ ಮತ್ತು ಪ್ರಾದೇಶಿಕ ಸಂಪರ್ಕವನ್ನು (Regional Connectivity) ಬಲಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ನೇಪಾಳ ನಡುವೆ ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ. ಭಾರತದ ಕೋಲ್ಕತ್ತಾ ಬಂದರಿನಿಂದ ಹೊರಟ ಮೊದಲ ನೇರ ವಾಣಿಜ್ಯ ಸರಕು ರೈಲು (Direct Commercial Freight Train) ಪೂರ್ವ ನೇಪಾಳದ ಬಿರಾಟ್‌ನಗರದಲ್ಲಿರುವ ಕಸ್ಟಮ್ಸ್ ಯಾರ್ಡ್ ಅನ್ನು ಯಶಸ್ವಿಯಾಗಿ ತಲುಪಿದೆ. ಈ ಐತಿಹಾಸಿಕ ಬೆಳವಣಿಗೆಯಿಂದ ಎರಡೂ ದೇಶಗಳ ನಡುವಿನ ವ್ಯಾಪಾರ ವೆಚ್ಚ ಗಮನಾರ್ಹವಾಗಿ ಕಡಿಮೆಯಾಗಲಿದ್ದು, ಸರಕು ಸಾಗಣೆ ಪ್ರಕ್ರಿಯೆ ಮತ್ತಷ್ಟು ವೇಗ ಪಡೆಯಲಿದೆ.➤ ಪ್ರಮುಖ ಮುಖ್ಯಾಂಶಗಳು: ಮಾರ್ಗ: ಭಾರತದ ಕೋಲ್ಕತ್ತಾ ಬಂದರು (ಶ್ಯಾಮಾ ಪ್ರಸಾದ್ ಮುಖರ್ಜಿ ಬಂದರು) → ಜೋಗಬನಿ-ಬಿರಾಟ್‌ನಗರ ಗಡಿರೇಖೆ → ಬಿರಾಟ್‌ನಗರ ಕಸ್ಟಮ್ಸ್ ಯಾರ್ಡ್ (ನೇಪಾಳ). ಆರಂಭದ ದಿನಾಂಕ: ಜುಲೈ 20, 2026. ಸರಕು ವಿವರ: 40 ನಲವತ್ತು-ಅಡಿ ಕಂಟೈನರ್‌ಗಳಲ್ಲಿ 'ಕ್ಯಾನೋಲಾ ಧಾನ್ಯ' (Canola Grain - ಖಾದ್ಯ ತೈಲ ಉತ್ಪಾದನೆಗೆ ಬಳಸುವ ಎಣ್ಣೆಕಾಳು). ನಿರ್ವಹಣಾ ಸಂಸ್ಥೆ: ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (CONCOR). ರೈಲು ಮಾರ್ಗ ಯೋಜನೆ: ಜೋಗಬನಿ-ಬಿರಾಟ್‌ನಗರ ಬ್ರಾಡ್‌ಗೇಜ್ ಗಡಿಯಾಚೆಗಿನ ರೈಲು ಮಾರ್ಗ. ➤ ದ್ವಿಪಕ್ಷೀಯ ಒಪ್ಪಂದ ಮತ್ತು ಹಿನ್ನೆಲೆ: ಭಾರತ ಸರ್ಕಾರದ ನೆರವಿನಿಂದ ನಿರ್ಮಿಸಿ ಜೂನ್ 1, 2023 ರಂದು ಉದ್ಘಾಟನೆಗೊಂಡಿದ್ದ ಜೋಗಬನಿ-ಬಿರಾಟ್‌ನಗರ ರೈಲು ಲಿಂಕ್, ನವೆಂಬರ್ 13, 2025 ರ ಒಪ್ಪಂದದ ತಿದ್ದುಪಡಿಯ ಫಲವಾಗಿ, ಬೀರ್‌ಗಂಜ್ ಹೊರತಾಗಿ ಮೂರನೇ ದೇಶಗಳ ರೈಲು ಸರಕುಗಳನ್ನು ನೇರವಾಗಿ ಸ್ವೀಕರಿಸುವ ನೇಪಾಳದ ಎರಡನೇ ಕಸ್ಟಮ್ಸ್ ಕೇಂದ್ರವಾಗಿ ಬಿರಾಟ್‌ನಗರ ಹೊರಹೊಮ್ಮಿದೆ. ➤ ಸಾಗಣೆ ಮತ್ತು ಲಾಜಿಸ್ಟಿಕ್ಸ್ ಪ್ರಾಮುಖ್ಯತೆ: ಸಾರಿಗೆ ವೆಚ್ಚ ಕಡಿತ: ಈ ನೇರ ರೈಲು ಸಂಪರ್ಕದಿಂದ ನೇಪಾಳದ ಕೈಗಾರಿಕೆಗಳಿಗೆ ಲಾಜಿಸ್ಟಿಕ್ಸ್ ವೆಚ್ಚದಲ್ಲಿ 20% ರಿಂದ 30% ರಷ್ಟು ಇಳಿತಾಯವಾಗಲಿದೆ. ಸಮಯ ಉಳಿತಾಯ: ಈ ಹಿಂದೆ ರಸ್ತೆ ಸಾರಿಗೆ ಮತ್ತು ಗಡಿ ದಾಟುವಿಕೆಯಲ್ಲಿ ಸಂಭವಿಸುತ್ತಿದ್ದ ವಿಳಂಬ ತಪ್ಪಿ, ನಿಯಮಿತ ಮತ್ತು ವೇಗದ ಸರಕು ಪೂರೈಕೆ ಸಾಧ್ಯವಾಗಲಿದೆ. ಭೂಪರಿವೇಷ್ಟಿತ ದೇಶಕ್ಕೆ ನೆರವು: ನೇಪಾಳವು ಭೂಪರಿವೇಷ್ಟಿತ (Landlocked) ದೇಶವಾಗಿದ್ದು, ಜಾಗತಿಕ ವ್ಯಾಪಾರಕ್ಕಾಗಿ ಭಾರತೀಯ ಬಂದರುಗಳು ಮತ್ತು ರೈಲು ಜಾಲವನ್ನು ನೆಚ್ಚಿಕೊಂಡಿದೆ.