* ಹಿರಿಯ ಸಾಹಿತಿ, ಕಾದಂಬರಿಕಾರ, ಭಾಷಾತಜ್ಞ, ಪ್ರಾಧ್ಯಾಪಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ ಕೆ. ಟಿ. ಗಟ್ಟಿ(85) ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು (ಫೆಬ್ರವರಿ 19) ರಂದು ಸೋಮವಾರ ಕೊನೆಯುಸಿರೆಳೆದಿದ್ದಾರೆ.* ಕನ್ನಡ, ತುಳು ಮತ್ತು ಇಂಗ್ಲಿಷ್ ಸಾಹಿತ್ಯಕ್ಕೆ ಕೆ.ಟಿ.ಗಟ್ಟಿ ಅವರ ಕೊಡುಗೆ ಅಪಾರವಾಗಿದ್ದು, ಇವರ ಸಾಹಿತ್ಯ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು. * ಪತ್ರಿಕಾ ಕಾದಂಬರಿಗಳ ಮೂಲಕ ಹೆಸರುವಾಸಿಯಾಗಿದ್ದ ಇವರು 1973ರಲ್ಲಿ ಮೊದಲ ಕಾದಂಬರಿ 'ಶಬ್ದಗಳು' ಬರೆದು ಪ್ರಕಟಿಸಿದ್ದರು. ಅಂದಿನಿಂದ ಕೆ.ಟಿ.ಗಟ್ಟಿಯವರು ಈವರೆಗೆ 48 ಕಾದಂಬರಿಗಳು 5 ಕಥಾಸಂಕಲನಗಳು, 6 ಪ್ರಬಂಧ ಸಂಕಲನಗಳು, 22 ನಾಟಕಗಳು, 14 ಬಾನುಲಿ ನಾಟಕಗಳು, 2 ಕವನ ಸಂಕಲನಗಳಲ್ಲದೆ ಆತ್ಮಕಥೆ, ವ್ಯಕ್ತಿಚಿತ್ರ, ಮಕ್ಕಳ ನಾಟಕ ಹಾಗೂ ಪ್ರವಾಸ ಕಥನಗಳನ್ನು ಬರೆದಿದ್ದಾರೆ.* ಕಾಸರಗೋಡಿನ ಕೂಡ್ಲುವಿನಲ್ಲಿ ಧೂಮಪ್ಪ ಗಟ್ಟಿ ಮತ್ತು ಪರಮೇಶ್ವರಿ ದಂಪತಿಯ ಪುತ್ರನಾಗಿ 1938ರ ಜುಲೈ 22ರಂದು ಜನಿಸಿದ ಕೂಡ್ಲು ತಿಮ್ಮಪ್ಪ ಗಟ್ಟಿ ಕಾಸರಗೋಡಿನಲ್ಲೇ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ವ್ಯಾಸಂಗ ಮಾಡಿದರು. * ಶಬ್ದಗಳು, ಸೌಮ್ಯ, ಕಾರ್ಮುಗಿಲು, ಪುನರಪಿ ಜನನಂ, ಕಾಮರೂಪಿ, ಸನ್ನಿವೇಶ, ಉರಿ, ನಿರಂತರ, ಮನೆ, ರಾಮಯಜ್ಞ, ನಿರಂತರ, ಸ್ವರ್ಣಮೃಗ, ಅಬ್ರಾಹ್ಮಣ, ಅಶ್ರುತ ಗಾನ, ಅಮುಕ್ತ, ಅವಿಭಕ್ತರು, ಕರಪಿ, ಕರ್ಮಣ್ಯೇ ವಾಧಿಕಾರಸ್ತೇ, ಪೂಜಾರಿ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂ ಗಮಯ, ಯುಗಾಂತರ, ಶಿಲಾತಪಸ್ವಿ ಅರಗಿನ ಮನೆ, ಭೂಮಿ ಗೀತೆ, ಕೂಪ, ಅಪೂರ್ಣ, ಸುಖಾಂತ, ಸಾಫಲ್ಯ, ಕಾಮಯಜ್ಞ, ಏಳು ಮಲ್ಲಿಗ ತೂಕದ ಹುಡುಗಿ, ಇತಿಹಾಸದ ಮೊಗಸಾಲೆಯಲ್ಲಿ , ಅನಂತರ, ಅಂತರಂಗದ ಅತಿಥಿ, ಯುದ್ಧ ಮುಂತಾದವು ಕೆ.ಟಿ ಗಟ್ಟಿ ಅವರು ಬರೆದ ಕಾದಂಬರಿಗಳು.