* ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್‌ ನ 33ನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ವಿಶಿಷ್ಟ-ವೈಭವದ ಆರಂಭೋತ್ಸವದೊಂದಿಗೆ ಶುಕ್ರವಾರ (ಜುಲೈ 26) ರಂದು ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಾಗುತ್ತದೆ. * ಜುಲೈ 27 ರಿಂದ ಸ್ಪರ್ಧೆ-ಪದಕ ವಿತರಣೆ ಶುರುವಾಗಲಿವೆ. 3ನೇ ಬಾರಿ ಮತ್ತು ಭರ್ತಿ 100 ವರ್ಷಗಳ ಬಳಿಕ ಒಲಿಂಪಿಕ್ಸ್‌ ವಹಿಸಿಕೊಳ್ಳುತ್ತಿರುವ ಹೆಗ್ಗಳಿಕೆ ಪ್ಯಾರಿಸ್ ನಗರದ್ದಾಗಿದೆ.* 21ನೇ ಶತಮಾನದಲ್ಲಿ ಮೊದಲ ಬಾರಿ ಒಲಿಂಪಿಕ್ಸ್‌ ಆಯೋಜಿಸುತ್ತಿರುವ ಪ್ಯಾರಿಸ್ ನಗರ, ಈಗಲೂ ಉಳಿಸಿಕೊಂಡು ಬಂದಿರುವ ತನ್ನ ಸಂಸ್ಕೃತಿ, ಬೆಳೆದುನಿಂತಿರುವ ಆಧುನಿಕ ತಂತ್ರಜ್ಞಾನ ಮತ್ತು ಸದಾ ಸ್ಫೂರ್ತಿಯ ಚಿಲುಮೆಯಾಗಿರುವ ತನ್ನ ಕ್ರೀಡಾ ಶಕ್ತಿಯನ್ನು ಜಗತ್ತಿನ ಎದುರು ತೆರೆದಿಡುವ ಉತ್ಸಾಹದಲ್ಲಿದೆ. * 32 ಕ್ರೀಡೆಗಳ 329 ವಿಭಾಗಗಳಲ್ಲಿ ಸ್ವರ್ಣ ಪದಕಗಳಿಗೆ ಹೋರಾಟಗಳು ನಡೆಯಲಿವೆ. ಜಗತ್ತಿನ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ತಮ್ಮ ಕ್ರೀಡಾ ಕೌಶಲವನ್ನು ಪ್ರದರ್ಶಿಸಲಿದ್ದಾರೆ.* ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಒಂದು ಸ್ವರ್ಣ ಸಹಿತ 7 ಪದಕಗಳನ್ನು ಗೆದ್ದು ಹೊಸ ಇತಿಹಾಸ ಬರೆದಿದ್ದ ಭಾರತ ಈ ಬಾರಿ 10ಕ್ಕಿಂತ ಅಧಿಕ ಪದಕ ಗೆಲ್ಲುವ ಗುರಿ ಹೊಂದಿದೆ. ಬಿಲ್ಗಾರರು ರ‍್ಯಾಂಕಿಂಗ್ ಸುತ್ತಿನಲ್ಲಿ ಕಣಕ್ಕಿಳಿಯುವುದರೊಂದಿಗೆ ಜುಲೈ 25 ರಂದು ಭಾರತದ ಪದಕಬೇಟೆಗೆ ಚಾಲನೆ ಲಭಿಸಿದೆ. ಪ್ಯಾರಿಸ್‌ನಲ್ಲಿ 16 ಕ್ರೀಡೆಗಳಲ್ಲಿ 117 ಭಾರತೀಯರು ಸ್ಪರ್ಧಿಸಲಿದ್ದು, ಈ ಪೈಕಿ 70 ಪುರುಷ ಮತ್ತು 47 ಮಹಿಳೆಯರು ಸೇರಿದ್ದಾರೆ.* ವಿಶಿಷ್ಟ ಆರಂಭೋತ್ಸವ# ಮೊದಲ ಬಾರಿ ಸ್ಟೇಡಿಯಂ ಹೊರಗೆ, ನೀರಿನ ಮೇಲೆ ಉದ್ಘಾಟನಾ ಸಮಾರಂಭ.# ಪ್ಯಾರಿಸ್ ಜೀವನದಿ ಸೀನ್‌ನಲ್ಲಿ ದೋಣಿಯ ಮೇಲೆ ಕ್ರೀಡಾಪಟುಗಳ ಪಥಸಂಚಲನ.# ಸಂಪೂರ್ಣ ಪ್ಯಾರಿಸ್‌ ನಗರವೇ ಒಲಿಂಪಿಕ್ಸ್ ಸ್ಟೇಡಿಯಂ; ಫ್ರಾನ್ಸ್ ಸಾಂಸ್ಕೃತಿಕ ವೈಭವ.# ಪ್ಯಾರಿಸ್ ಹೆಗ್ಗುರುತು ಐಫೆಲ್ ಟವರ್ ಆರಂಭೋತ್ಸವ, ಕ್ರೀಡಾಕೂಟದ ಭಾಗ.# ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್‌ರಿಂದ ಕೂಟ ಆರಂಭದ ಅಧಿಕೃತ ಘೋಷಣೆ.# ಒಟ್ಟಾರೆ 3.26 ಲಕ್ಷ ಪ್ರೇಕ್ಷಕರು ಭಾಗಿ ; ಚಾಂಪಿಯನ್ಸ್‌ ಪಾರ್ಕ್‌ನಲ್ಲಿ 13 ಸಾವಿರ ಪ್ರೇಕ್ಷಕರು.# ಕ್ರೀಡಾಪಟುಗಳ ಪಥಸಂಚಲನದಲ್ಲಿ ಪಿವಿ ಸಿಂಧು, ಶರತ್ ಕಮಲ್ ಭಾರತದ ಧ್ವಜಧಾರಿಗಳು.