* ಮೇಕ್‌ ಇನ್‌ ಇಂಡಿಯಾ ನೀತಿಗೆ ಉತ್ತೇಜನ ನೀಡಿದ ಬಳಿಕ ದೇಶದ ರಕ್ಷಣಾ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಭಾರೀ ಬದಲಾವಣೆ 2023-24 ನೇ ಸಾಲಿನಲ್ಲಿ ಇನ್ನೊಂದು ಮೈಲುಗಲ್ಲು ಸ್ಥಾಪಿಸಿದೆ. ವಾರ್ಷಿಕ ರಕ್ಷಣಾ ಉತ್ಪಾದನೆ 1.27 ಲಕ್ಷ ಕೋಟಿ ರೂ. ಮೌಲ್ಯವನ್ನು ತಲುಪಿದೆ. ದೇಶಿಯ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಸಾರ್ವಕಾಲಿಕ ಗರಿಷ್ಠ ದಾಖಲೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ತಿಳಿಸಿದ್ದಾರೆ.* ನರೇಂದ್ರ ಮೋದಿ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಯಿಂದ ಇದು ಸಾಕಾರವಾಗಿದೆ. ಖಾಸಗಿ ಹಾಗೂ ಸಾರ್ವಜನಿಕ ಸ್ವಾಮ್ಯದ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ಕಂಪನಿಗಳು ಒಟ್ಟಾಗಿ ಈ ಸಾಧನೆ ಮಾಡಿವೆ. ರಕ್ಷಣಾ ಉತ್ಪಾದನೆಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪಾಲು ಶೇ.79.2ರಷ್ಟಿದ್ದರೆ, ಖಾಸಗಿ ಕಂಪನಿಗಳ ಶೇ.20.8ರಷ್ಟಿದೆ. ಕಳೆದ ಸಾಲಿಗಿಂತ ರಕ್ಷಣಾ ಉತ್ಪಾದನೆ ಈ ಸಾಲಿನಲ್ಲಿ ಶೇ.16.8ರಷ್ಟು ಅಧಿಕವಾಗಿದೆ. ಇದೇ ವೇಳೆ, 2023-24ನೇ ಸಾಲಿನಲ್ಲಿ ಭಾರತ 21,083 ಕೋಟಿ ರೂ.ಗಳಷ್ಟು ರಕ್ಷಣಾ ಸಾಮಗ್ರಿಗಳನ್ನು ವಿದೇಶಗಳಿಗೆ ರಫ್ತು ಮಾಡಿದ್ದು, ಇದೂ ಕೂಡ ದಾಖಲೆಯಾಗಿದೆ’ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.* ರಕ್ಷಣಾ ಕ್ಷೇತ್ರದಲ್ಲಿನ ಈ ಸಾಧನೆಯು ನಮ್ಮ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲಿದೆ. ‘ಭಾರತವನ್ನು ರಕ್ಷಣಾ ಉತ್ಪಾದನೆಯ ಜಾಗತಿಕ ಕೇಂದ್ರವಾಗಿಸುವ ನಿಟ್ಟಿನಲ್ಲಿ ಇದು ಇನ್ನೊಂದು ಪ್ರಗತಿದಾಯಕ ಹೆಜ್ಜೆ’ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್‌’ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.