Job Description: ➤ ಜಗತ್ತಿನ ಪ್ರಸಿದ್ಧ ಬಿಲಿಯನೇರ್ ಜೆಫ್ ಬೆಜೋಸ್ (Jeff Bezos) ಒಡೆತನದ ಬಾಹ್ಯಾಕಾಶ ಸಂಸ್ಥೆಯಾದ ಬ್ಲೂ ಒರಿಜಿನ್ (Blue Origin) ಗೆ ಭಾರಿ ಹಿನ್ನಡೆಯಾಗಿದೆ. ಸಂಸ್ಥೆಯ ಮಹತ್ವಾಕಾಂಕ್ಷೆಯ ಮತ್ತು ಬೃಹತ್ ಗಾತ್ರದ 'ನ್ಯೂ ಗ್ಲೆನ್' (New Glenn) ರಾಕೆಟ್, ಉಡಾವಣಾ ಪ್ಯಾಡ್‌ನಲ್ಲಿ ನೆಲದ ಮೇಲಿನ ಎಂಜಿನ್ ಪರೀಕ್ಷೆಯ (Ground Hot-fire Test) ವೇಳೆ ಭೀಕರವಾಗಿ ಸ್ಫೋಟಗೊಂಡಿದೆ. ಅಮೆರಿಕದ ಫ್ಲೋರಿಡಾದಲ್ಲಿರುವ ಕೇಪ್ ಕ್ಯಾನವೆರಲ್ ಸ್ಪೇಸ್ ಫೋರ್ಸ್ ಸ್ಟೇಷನ್‌ನ ಲಾಂಚ್ ಕಾಂಪ್ಲೆಕ್ಸ್ 36 ರಲ್ಲಿ ಮೇ 28ರ ರಾತ್ರಿ ಈ ಅವಘಡ ಸಂಭವಿಸಿದೆ. ಮುಂದಿನ ವಾರ ನಿಗದಿಯಾಗಿದ್ದ ಪ್ರಮುಖ ಸ್ಯಾಟಲೈಟ್ ಉಡಾವಣೆಗೂ ಮುನ್ನ ಈ ಎಂಜಿನ್ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ➤ ರಾಕೆಟ್ ಅನ್ನು ಭೂಮಿಗೆ ಭದ್ರವಾಗಿ ಜೋಡಿಸಿ, ಅದರ ಶಕ್ತಿಶಾಲಿ 7 BE-4 ಎಂಜಿನ್‌ಗಳನ್ನು ಚಾಲನೆಗೊಳಿಸಿ ನಡೆಸುವ 'ಸ್ಟಾಟಿಕ್-ಫೈರ್ ಪರೀಕ್ಷೆ' (Static-fire Test / Hot-fire Test) ಇದಾಗಿತ್ತು. ರಾತ್ರಿ ಸುಮಾರು 9 ಗಂಟೆಗೆ ಎಂಜಿನ್ ಉರಿಯಲು ಪ್ರಾರಂಭಿಸಿದ ಕೆಲವೇ ಸೆಕೆಂಡುಗಳಲ್ಲಿ ರಾಕೆಟ್‌ನಲ್ಲಿ ತಾಂತ್ರಿಕ ದೋಷ (Anomaly) ಕಾಣಿಸಿಕೊಂಡು ಬೃಹತ್ ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿತು. ➤ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸುತ್ತಮುತ್ತಲಿನ ಕೇಪ್ ಕ್ಯಾನವೆರಲ್ ಮತ್ತು ಕೋಕೋ ಬೀಚ್ ಭಾಗದಲ್ಲಿದ್ದ ಮನೆಗಳು ಲಘುವಾಗಿ ಕಂಪಿಸಿದ ಅನುಭವವಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಡೀ ಆಕಾಶವೇ ಕೆಲಕಾಲ ಕಿತ್ತಳೆ ಬಣ್ಣಕ್ಕೆ ತಿರುಗಿತ್ತು. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮತ್ತು ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಬ್ಲೂ ಒರಿಜಿನ್ ಪ್ರಕಟಿಸಿದೆ. ➤ ಅಮೆಜಾನ್ ಉಪಗ್ರಹಗಳು ಪಾರಾಗಿದ್ದು ಹೇಗೆ? ಮುಂದಿನ ವಾರ ಅಮೆಜಾನ್ ಸಂಸ್ಥೆಯ ಇಂಟರ್ನೆಟ್ ಜಾಲದ ಭಾಗವಾಗಿರುವ 'ಪ್ರಾಜೆಕ್ಟ್ ಕೈಪರ್' (Project Kuiper) ನ 48 ಕೃತಕ ಉಪಗ್ರಹಗಳನ್ನು ಹೊತ್ತು ಈ ರಾಕೆಟ್ ಬಾಹ್ಯಾಕಾಶಕ್ಕೆ ಚಿಮ್ಮಬೇಕಿತ್ತು. ಆದರೆ, ಅದೃಷ್ಟವಶಾತ್ ಈ ಉಪಗ್ರಹಗಳನ್ನು ಇನ್ನು ರಾಕೆಟ್‌ಗೆ ಅಳವಡಿಸಿರಲಿಲ್ಲ (Not Mated). ಇದರಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಉಪಗ್ರಹಗಳು ಭಸ್ಮವಾಗುವುದರಿಂದ ಪಾರಾಗಿವೆ. ➤ ನ್ಯೂ ಗ್ಲೆನ್ ಎಂಬುದು ಅಮೆರಿಕದ 'ಬ್ಲೂ ಒರಿಜಿನ್' ಸಂಸ್ಥೆ ನಿರ್ಮಿಸಿರುವ 321 ಅಡಿ ಎತ್ತರದ ಬೃಹತ್ ಮರುಬಳಕೆ ಮಾಡಬಹುದಾದ ರಾಕೆಟ್ ಆಗಿದ್ದು, ಇದು ಲಿಕ್ವಿಡ್ ಮೀಥೇನ್ ಹಾಗೂ ಲಿಕ್ವಿಡ್ ಆಕ್ಸಿಜನ್ ಇಂಧನದಿಂದ ಚಲಿಸುತ್ತದೆ ಮತ್ತು ಇದಕ್ಕೆ ಮೊದಲ ಅಮೆರಿಕನ್ ಗಗನಯಾತ್ರಿ ಜಾನ್ ಗ್ಲೆನ್ ಅವರ ಹೆಸರಿಡಲಾಗಿದೆ. ➤ ನಾಸಾ (NASA) ಮತ್ತು ಜೆಫ್ ಬೆಜೋಸ್‌ಗೆ ಭಾರಿ ಹಿನ್ನಡೆ: ನಾಸಾದ ಪ್ರತಿಷ್ಠಿತ 'ಆರ್ಟೆಮಿಸ್ ಮಿಷನ್' (Artemis Program) ಅಡಿಯಲ್ಲಿ ಚಂದ್ರನ ಮೇಲೆ ಮಾನವನನ್ನು ಮತ್ತೆ ಇಳಿಸಲು ಮತ್ತು ಅಲ್ಲಿ ಚಂದ್ರನ ಬೇಸ್ (Moon Base) ನಿರ್ಮಿಸಲು ಬ್ಲೂ ಒರಿಜಿನ್ ಸಂಸ್ಥೆಯೊಂದಿಗೆ ನಾಸಾ ಒಪ್ಪಂದ ಮಾಡಿಕೊಂಡಿದೆ. ಚಂದ್ರನ ಅಂಗಳಕ್ಕೆ ಗಗನಯಾತ್ರಿಗಳನ್ನು ಕೊಂಡೊಯ್ಯುವ ಲ್ಯಾಂಡರ್‌ಗಳನ್ನು ಉಡಾವಣೆ ಮಾಡಲು ಈ 'ನ್ಯೂ ಗ್ಲೆನ್' ರಾಕೆಟ್ ಅತ್ಯಗತ್ಯವಾಗಿದೆ. ಈಗಾಗಲೇ ಕಳೆದ ಏಪ್ರಿಲ್‌ನಲ್ಲಿ ನಡೆದ ಮೂರನೇ ಉಡಾವಣೆಯ ವೇಳೆ ಉಪಗ್ರಹವೊಂದನ್ನು ತಪ್ಪು ಕಕ್ಷೆಗೆ ತಲುಪಿಸಿ ಈ ರಾಕೆಟ್ ಸುದ್ದಿಯಾಗಿತ್ತು. ಈಗ ಉಡಾವಣಾ ಪ್ಯಾಡ್‌ನಲ್ಲೇ ಸ್ಫೋಟಗೊಂಡಿರುವುದರಿಂದ ನಾಸಾದ ಚಂದ್ರಯಾನದ ಯೋಜನೆಗಳು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ➤ ಜೆಫ್ ಬೆಜೋಸ್ ಪ್ರತಿಕ್ರಿಯೆ: "ಇದು ಅತ್ಯಂತ ಕಠಿಣ ದಿನ. ಆದರೆ ಸ್ಫೋಟಕ್ಕೆ ನಿಖರ ಕಾರಣ ಏನೆಂಬುದನ್ನು ಪತ್ತೆ ಹಚ್ಚಿ, ಧ್ವಂಸಗೊಂಡಿರುವ ಮೂಲಸೌಕರ್ಯಗಳನ್ನು ನಾವು ಮತ್ತೆ ಪುನರ್ನಿರ್ಮಿಸುತ್ತೇವೆ. ಶೀಘ್ರದಲ್ಲೇ ಮತ್ತೆ ಹಾರಾಟ ನಡೆಸುತ್ತೇವೆ, ಈ ಪ್ರಯತ್ನಕ್ಕೆ ತಕ್ಕ ಮೌಲ್ಯವಿದೆ." ಎಂದು ಎಕ್ಸ್ (X) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲೋನ್ ಮಸ್ಕ್ ಕೂಡ ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.