* ಅದಾನಿ ಸಮೂಹದ ಅಂಬುಜಾ ಸಿಮೆಂಟ್‌ ಕಂಪನಿಯು ಸಿ.ಕೆ. ಬಿರ್ಲಾ ಸಮೂಹದ ಓರಿಯೆಂಟ್‌ ಸಿಮೆಂಟ್‌ ಕಂಪನಿಯ ಶೇ. 46.8ರಷ್ಟು ಷೇರುಗಳನ್ನು ₹8,100 ಕೋಟಿಗೆ ಸ್ವಾಧೀನಪಡಿಸಿಕೊಳ್ಳಲಿದ್ದು, ಈ ಕುರಿತ ಒಪ್ಪಂದಕ್ಕೆ ಎರಡೂ ಕಂಪನಿಗಳು ಸಹಿ ಹಾಕಿವೆ. * ಅಂಬುಜಾ ಸಿಮೆಂಟ್ ದೇಶದ ಎರಡನೇ ಅತಿದೊಡ್ಡ ಸಿಮೆಂಟ್‌ ತಯಾರಿಕಾ ಕಂಪನಿಯಾಗಿದೆ. ಜೂನ್‌ನಲ್ಲಿ ಅದಾನಿ ಸಮೂಹವು ಹೈದರಾಬಾದ್ ಮೂಲದ ಪೆನ್ನಾ ಸಿಮೆಂಟ್‌ ಅನ್ನು ₹10,422 ಕೋಟಿಗೆ ಸ್ವಾಧೀನಪಡಿಸಿಕೊಂಡಿತ್ತು.* ಓರಿಯೆಂಟ್‌ನ ವಾರ್ಷಿಕ ಉತ್ಪಾದನಾ ಸಾಮರ್ಥ್ಯ 85 ಲಕ್ಷ ಟನ್‌ ಆಗಿದೆ. ಈ ಸ್ವಾಧೀನದಿಂದ ಅದಾನಿ ಸಮೂಹದ ಸಿಮೆಂಟ್‌ ಉತ್ಪಾದನಾ ಸಾಮರ್ಥ್ಯವು 9.74 ಕೋಟಿ ಟನ್‌ಗೆ ಹೆಚ್ಚಲಿದೆ. 2028ರ ವೇಳೆಗೆ 14 ಕೋಟಿ ಟನ್‌ಗೆ ಹೆಚ್ಚಿಸುವ ಗುರಿ ಹೊಂದಿದೆ. ಕಲಬುರಗಿಯಲ್ಲಿ ಕಂಪನಿಯ ಘಟಕ ಇದ್ದು, 2015ರಲ್ಲಿ ಸ್ಥಾಪಿಸಲಾಗಿರುವ ಈ ಘಟಕ ವಾರ್ಷಿಕ 3 ಮಿಲಿಯನ್‌ ಟನ್‌ ಸಿಮೆಂಟ್‌ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.*  ಕಳೆದ ನಾಲ್ಕು ವರ್ಷಗಳಿಂದ ಸಿಮೆಂಟ್‌ ಬೆಲೆ ಶೇ. 4ರಷ್ಟು ಹೆಚ್ಚಳವಾಗಿದೆ. ಈಗ 50 ಕೆ.ಜಿ. ತೂಕದ ಸಿಮೆಂಟ್‌ ಬೆಲೆ 391 ರೂ. ಆಗಿದೆ. ವಸತಿ ಮತ್ತು ಮೂಲ ಸೌಕರ್ಯದಲ್ಲಿ ಹೂಡಿಕೆ ಏರುತ್ತಲೇ ಇದೆ. ಉತ್ಪಾದನಾ ವೆಚ್ಚದಲ್ಲಿ ಸ್ಥಿರತೆ ಇದೆ. ಹೀಗಾಗಿ ಸಿಮೆಂಟ್‌ ಉದ್ಯಮ ಆಕರ್ಷಣೀಯ ಎಂದೆನಿಸಿದೆ.