* ಒಂದು ದೇಶ ಒಂದು ಸ್ಟುಡೆಂಟ್ ಐಡಿ ಯೋಜನೆಯಾಗಿರುವ ಅಟೋಮೆಟೆಡ್ ಪರ್ಮನೆಂಟ್ ಅಕಾಡೆಮಿಕ್ ರಿಜಿಸ್ಟ್ರಿ (ಎಪಿಎಎಆರ್- ಅಪಾರ್) ಐಡಿಯನ್ನು ಇನ್ನಷ್ಟು ತ್ವರಿತಗೊಳಿಸಲು ಕೇಂದ್ರ ಶಿಕ್ಷಣ ಇಲಾಖೆ ನಿರ್ಧರಿಸಿದೆ.* ಅಕ್ಟೋಬರ್ 22 ರಂದು (ಮಂಗಳವಾರ) ನವದೆಹಲಿಯಲ್ಲಿ ಹಿರಿಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಸಭೆ ನಡೆಸಿದರು. ಅಪಾರ್ ಐಡಿ ಕುರಿತಾದ ಪ್ರಗತಿಯನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಒಂದು ದೇಶ ಒಂದು ಗುರುತಿನ ಸಂಖ್ಯೆ ನೀಡಲು ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು.* ದೇಶಾದ್ಯಂತ ಎಲ್ಲ ಶೈಕ್ಷಣಿಕ ಮಂಡಳಿಗಳ, ಎಲ್ಲ ಶಾಲೆಗಳ ಪ್ರತಿಯೊಂದು ತರಗತಿಯ ಮಕ್ಕಳಿಗೂ ಇದನ್ನು ವಿಸ್ತರಿಸಬೇಕಿದೆ. ವಿದ್ಯಾರ್ಥಿ ಗುರುತಿನ ಸಂಖ್ಯೆ ಸೃಜಿಸಲು ಈಗಿರುವ ಯೂಡೈಸ್ + ತಂತ್ರಾಂಶದಲ್ಲಿಯೇ ಅಪಾರ್ ಐಡಿ ಮಾಡ್ಯುಲ್ ಸೇರ್ಪಡೆಗೊಳ್ಳಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ.