* ಭಾರತೀಯ ವೀರ ಯೋಧರ ಧೈರ್ಯ, ಸಾಹಸ ಸ್ಮರಿಸಿ ಕೊಡ ಮಾಡುವ ಶೌರ್ಯ ಪ್ರಶಸ್ತಿಯನ್ನು ಕೇಂದ್ರ ರಕ್ಷಣಾ ಸಚಿವಾಲಯ ಘೋಷಿಸಿದೆ. ಶಾಂತಿಕಾಲದ ಎರಡನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿ ಎಂದೇ ಪರಿಗಣಿಸಲಾಗಿರುವ ಕೀರ್ತಿ ಚಕ್ರ ಪ್ರಶಸ್ತಿಗೆ 6 ಸೇನಾ ಯೋಧರನ್ನು ಆಯ್ಕೆ ಮಾಡಲಾಗಿದೆ.* ಗಣರಾಜ್ಯೋತ್ಸವದ ದಿನದಂದು ಅಧ್ಯಕ್ಷ ದ್ರೌಪದಿ ಮುರ್ಮು ಅವರು 80 ಸೈನಿಕರಿಗೆ ಶೌರ್ಯ ಪ್ರಶಸ್ತಿಯನ್ನು ಘೋಷಿಸಿದರು. ಇವರಲ್ಲಿ 12 ಸೈನಿಕರಿಗೆ ಮರಣೋತ್ತರವಾಗಿ ಈ ಶೌರ್ಯ ಪ್ರಶಸ್ತಿಯನ್ನ ನೀಡಲಾಗುವುದು. * ರಾಷ್ಟ್ರಪತಿ ಭವನದಿಂದ ಶೌರ್ಯ ಪ್ರಶಸ್ತಿಗಳನ್ನ ಘೋಷಿಸಲಾಗಿದ್ದು, ಈ ಪೈಕಿ ಆರು ಮಂದಿಗೆ ಕೀರ್ತಿ ಚಕ್ರ ಮತ್ತು 16 ವೀರ ಯೋಧರಿಗೆ ಶೌರ್ಯ ಚಕ್ರ ನೀಡಲಾಗುವುದು. 53 ಯೋಧರಿಗೆ ಸೇನಾ ಪದಕ ನೀಡಲಾಗುವುದು. ಒಬ್ಬ ಸೈನಿಕನಿಗೆ ನೌಕಾ ಪದಕ ಮತ್ತು 4 ವಾಯುಪಡೆಯ ಪದಕಗಳನ್ನ ನೀಡಲಾಗುವುದು.* ಶೌರ್ಯ ಪ್ರಶಸ್ತಿಗಳ ಜೊತೆಗೆ, ರಾಷ್ಟ್ರಪತಿಗಳು ವಿಶಿಷ್ಟ ಸೇವಾ ಪದಕ ಮತ್ತು ಯುದ್ಧ ಪದಕವನ್ನು ಸಹ ಘೋಷಿಸಿದರು. ಇದರಲ್ಲಿ 311 ಹೆಸರುಗಳನ್ನು ಆಯ್ಕೆ ಮಾಡಲಾಗಿದೆ. * ಇವರಲ್ಲಿ 31 ಮಂದಿ ಪರಮ ವಿಶಿಷ್ಟ ಸೇವಾ ಪದಕ, 4 ಮಂದಿ ಉತ್ತಮ ಯುದ್ಧ ಸೇವಾ ಪದಕ, 59 ಮಂದಿ ಶ್ರೇಷ್ಠ ಸೇವಾ ಪದಕ, 10 ಮಂದಿ ಯುದ್ಧ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ. ಇವುಗಳಲ್ಲಿ 33 ಸೇನಾ ಪದಕಗಳು, 10 ನೌಕಾಪಡೆಯ ಪದಕಗಳು ಮತ್ತು 14 ವಾಯುಪಡೆಯ ಪದಕಗಳನ್ನು ನೀಡಲಾಗುತ್ತದೆ. ಇದಲ್ಲದೆ, 130 ಹೆಸರುಗಳನ್ನು ವಿಶಿಷ್ಟ ಸೇವಾ ಪದಕಕ್ಕಾಗಿ ಘೋಷಿಸಲಾಯಿತು.* ಭಯೋತ್ಪಾದಕರ ಗುಂಡಿನ ದಾಳಿಗೆ ಎದೆಯೊಡ್ಡಿ ವೀರ ಮರಣವನ್ನಪ್ಪಿದ ಕರ್ನಾಟಕದ ಹೆಮ್ಮೆಯ ಯೋಧ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ.* ಶೌರ್ಯಚಕ್ರ ಪ್ರಶಸ್ತಿಗೆ ಆಯ್ಕೆಯಾದವರು : ಮಾನೆಓ ಫ್ರಾನ್ಸಿಸ್ (21 ಪ್ಯಾರಾಚೂಟ್ ರೆಜಿಮೆಂಟ್), ಮೇಜರ್ ಅಮನದೀಪ್ ಜಾಖಡ್ (4 ಸಿಖ್ ರೆಜಿಮೆಂಟ್), ನಯೀಬ್ ಸುಬೇದಾರ್ ಬರಿಯಾ ಸಂಜಯ್ ಕುಮಾರ್ ಭಮರ್ ಸಿಂಗ್ (ಮಹಾರ್ ರೆಜಿಮೆಂಟ್‌ನ), ಹವಾಲ್ದಾರ್ ಸಂಜಯ್ ಕುಮಾರ್ (9 ಅಸ್ಸಾಂ ರೈಫಲ್ಸ್) ಮತ್ತು ಪರ್ಷೋತ್ತಮ್ ಕುಮಾರ್ (ರಾಷ್ಟ್ರೀಯ ರೈಫಲ್ಸ್), ಅಕ್ಷತ್ ಉಪಾಧ್ಯಾಯ (ಜಾಟ್ ರೆಜಿಮೆಂಟ್).