* ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ. ಸಿಂಹಗಳ ಸಂರಕ್ಷಣೆಗೆ ಬೆಂಬಲ ಸೂಚಿಸುವ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಸಿಂಹ ದಿನವನ್ನು ಆಚರಣೆ ಮಾಡಲಾಗುತ್ತದೆ.* ಬಿಗ್ ಕ್ಯಾಟ್ ಇನ್ಶಿಯೇಟಿವ್ ಆ್ಯಂಡ್ ನ್ಯಾಷನಲ್ ಜಿಯೋಗ್ರಾಫಿಕ್‌ನ ಸಹಸಂಸ್ಥಾಪಕರಾದ ಡೆರೆಕ್ ಹಾಗೂ ಬೆವರ್ಲಿ ಜೋಬರ್ಟ್ ಎಂಬ ದಂಪತಿಗಳು ಆಗಸ್ಟ್ 10 2013ರಲ್ಲಿ ವಿಶ್ವ ಸಿಂಹದಿನವನ್ನು ಮೊದಲು ಪ್ರಾರಂಭಿಸಿದರು.* ಈಗ ಸಿಂಹವನ್ನು ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಗುರುತಿಸಲಾಗಿದೆ. ಭಾರತದಲ್ಲಿ ಕಂಡು ಬರುವ ಐದು ದೊಡ್ಡ ಬೆಕ್ಕುಗಳಲ್ಲಿ ಏಷ್ಯಾಟಿಕ್ ಸಿಂಹ ಕೂಡಾ ಒಂದಾಗಿದೆ. ಕಾಡಿನಲ್ಲಿ ಸಿಂಹಗಳ ಸಂಖ್ಯೆ ಕುಸಿಯುತ್ತಿದೆ. ಉದಾಹರಣೆಗೆ, ಆಫ್ರಿಕನ್ ಸಿಂಹಗಳ ಸಂಖ್ಯೆ 2001 ರಿಂದ 43% ರಷ್ಟು ಕಡಿಮೆಯಾಗಿದೆ. ಹಾಗಾಗಿ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.* ಸಿಂಹಗಳನ್ನು ಹೆಚ್ಚಾಗಿ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತಿದೆ. ಹಾಗಾಗಿ ಸಿಂಹಗಳ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಕಡಿಮೆ ಮಾಡಲು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಾವೆಲ್ಲರೂ ವಿಶ್ವ ಸಿಂಹ ದಿನವನ್ನು ಆಚರಿಸಬೇಕಾಗಿದೆ.* ಸಿಂಹಗಳ ಸಂಖ್ಯೆಯು ಕ್ಷೀಣಿಸುತ್ತಲೇ ಇರುವುದರಿಂದ, ಈ ವಿಶ್ವ ಸಿಂಹ ದಿನವು ಅವುಗಳ ಉಳಿವಿಗಾಗಿ ತಕ್ಷಣದ ಕ್ರಮಕ್ಕೆ ಕರೆ ನೀಡುತ್ತದೆ. ಸಿಂಹಗಳು ಶಕ್ತಿ ಮತ್ತು ಧೈರ್ಯದ ಸಂಕೇತವಾಗಿದೆ ಮತ್ತು ಪ್ರಕೃತಿಯ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.* ನಮ್ಮ ದೇಶದ ಗಿರ್ ಕಾಡುಗಳಲ್ಲಿ ಸಿಂಹಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅವುಗಳನ್ನು ಏಷ್ಯಾಟಿಕ್ ಸಿಂಹಗಳು ಎಂದು ಕರೆಯಲಾಗುತ್ತದೆ. ಈ ಸಿಂಹಗಳ ವೈಜ್ಞಾನಿಕ ಹೆಸರು ಪ್ಯಾಂಥೆರಾ ಲಿಯೋ ಪರ್ಸಿಕಾ. ಇವುಗಳ ಎತ್ತರ ಸುಮಾರು 110 ಸೆಂ.ಮೀ. ಇರುತ್ತದೆ. ಈ ಸಿಂಹಗಳು ಆಫ್ರಿಕನ್ ಸಿಂಹಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ವಯಸ್ಕ ಹೆಣ್ಣು ಸಿಂಹದ ತೂಕ 110 ರಿಂದ 120 ಕೆ.ಜಿ. ಇದ್ದರೆ, ಗಂಡು ಸಿಂಹದ ತೂಕ 160 ರಿಂದ 190 ಕೆ.ಜಿ. ಇರುತ್ತದೆ.