* ಹಾಸನ ಜಿಲ್ಲೆಯ ಶ್ರವಣಬೆಳಗೊಳ ಮತ್ತು ಗದಗ ಜಿಲ್ಲೆಯ ಲಕ್ಕುಂಡಿಯ ಸ್ಮಾರಕಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಸೇರಿಸಲು ರಾಜ್ಯ ಪುರಾತತ್ವ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಪ್ರಸ್ತಾವನೆ ಸಿದ್ದಪಿಡಿಸುತ್ತಿದೆ.* 2014ರಲ್ಲಿ ಬೇಲೂರು ಮತ್ತು ಹಳೇಬೀಡು ದೇವಾಲಯಗಳನ್ನು ಯುನೆಸ್ಕೋ ವಿಶ್ವ ಪರಂಪರೆ ತಾಣಗಳ ತಾತ್ಕಾಲಿಕ ಪಟ್ಟಿಗೆ ನಾಮನಿರ್ದೇಶನ ಗೊಂಡಿದ್ದವು. ಈ ವರ್ಷ ಸೆಪ್ಟಂಬರ್‌ನಲ್ಲಿ ಅವುಗಳನ್ನು ಯುನೆಸ್ಕೋ ವಿಶ್ವ ಪರಂಪರೆ ತಾಣಗಳ ಖಾಯಂ ಪಟ್ಟಿಗೆ ಸೇರಿಸಲಾಗಿದೆ.* ದಸ್ತಾವೇಜನ್ನು ತಯಾರಿಸಲು, ಸ್ಥಳದ ಅಧ್ಯಯನ ನಡೆಸಲು ಹಾಗೂ ವರದಿಯನ್ನು ಸಿದ್ದಪಡಿಸಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸಲ್ಲಿಸಲು ಸಿದ್ದತೆ ನಡೆಯುತ್ತಿದೆ ಎಂದು ರಾಜ್ಯ ಪುರಾತತ್ವ ಇಲಾಖೆಯ ಕಮಿಷನರ್ ಎ. ದೇವರಾಜ್ ಅವರು ಮಾಹಿತಿ ನೀಡಿದ್ದಾರೆ.* ಜೈನರ ಪುಣ್ಯ ಕ್ಷೇತ್ರ ಎಂದು ಹೇಳಲಾಗಿರುವ ಶ್ರವಣಬೆಳಗೊಳ, ಗಂಗರ ಕಾಲದ ಇತಿಹಾಸ ಹೊಂದಿದೆ. ಗಂಗರ ಅವಧಿಯಲ್ಲಿ ಕ್ರಿ.ಶ 981ರಲ್ಲಿ ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರ ಮೂರ್ತಿಯನ್ನು ಚಾವುಂಡರಾಯ ಕೆತ್ತಿಸಿದ್ದರು. ಇಲ್ಲಿ 800ಕ್ಕೂ ಹೆಚ್ಚು ಶಾಸನಗಳಿವೆ. * ಲಕ್ಕುಂಡಿಯಲ್ಲಿ ಸೋಮೇಶ್ವರ, ಕುಂಬರೇಶ್ವರ, ಮಾಣಿಕೇಶ್ವರ, ನಾಗನಾಥ, ನಾಗೇಶ್ವರ, ಕಾಶಿವಿಶ್ವೇಶ್ವರ, ಶಂಕರಲಿಂಗ, ಲಕ್ಷ್ಮೀನಾರಾಯಣ, ಗಣಪತಿ, ಚಂದ್ರಮೌಳೇಶ್ವರ, ಜೈನ ಬಸದಿ, ಬ್ರಹ್ಮ ಜಿನಾಲಯ ಮುಂತಾದ ಹಲವಾರು ಪುರಾತನ ದೇವಾಲಯಗಳಿವೆ.