* ಚೆನ್ನೈ, ಗ್ರಾಂಡ್‌ ಮಾಸ್ಟರ್ಸ್ ಚೆಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಗುರುವಾರ (ನವೆಂಬರ್ 07) ಸರ್ಬಿಯಾದ ಅಲೆಕ್ಸಿ ಸರನ ಅವರನ್ನು ಸೋಲಿಸುವ ಮೂಲಕ ಭಾರತದ ಅರ್ಜುನ್ ಇರಿಗೇಶಿ ಅವರು ವಿಶ್ವ ಚೆಸ್ ಕ್ರಮಾಂಕದಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. * ಮಾಸ್ಟರ್ಸ್ ವಿಭಾಗದಲ್ಲಿ ಮೂರನೇ ಸುತ್ತಿನ ನಂತರ ಅರ್ಜುನ್ ಅವರು ಇರಾನಿನ ಅಮಿನ್ ತಬಾತಬೇಯಿ ಜೊತೆ ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಇಬ್ಬರೂ ತಲಾ ಎರಡೂವರೆ ಪಾಯಿಂಟ್ಸ್ ಪಡೆದುಕೊಂಡಿದ್ದಾರೆ.* ಅರ್ಮೇನಿಯ ಸಂಜಾತ ಅಮೆರಿಕದ ಆಟಗಾರ ಲೆವೊನ್ ಅರೋನಿಯನ್ (2) ಮೂರನೇ ಸ್ಥಾನದಲ್ಲಿದ್ದಾರೆ.*  ಅರ್ಜುನ್ 2,800 ಇಎಲ್‌ಒ ರೇಟಿಂಗ್ ತಲುಪಿದ್ದಾರೆ. ಫಿಡೆ ಕ್ರಮಾಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಅಮೆರಿಕದ ಫ್ಯಾಬಿಯಾನೊ ಕರುವಾನಾ ಅವರನ್ನು ಹಿಂದೆಹಾಕಿದರು.* ಈ ಟೂರ್ನಿಯ ಫಲಿತಾಂಶದಲ್ಲಿ ಇರಾನಿನ ತಬಾತಬೇಯಿ, ಫ್ರಾನ್ಸ್‌ ನ ಗ್ರಾಂಡ್‌ಮಾಸ್ಟರ್ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರಿಗೆ ಆಘಾತ ನೀಡಿದರು.* ಎಂಟು ಆಟಗಾರರು ಇರುವಈ ಟೂರ್ನಿಯಲ್ಲಿ ಅರೊನಿಯನ್,ಇರಾನಿನ ಪರ್ಹಾಮ್ ಮಘಸೂಡ್ಲು ಮೇಲೆ ಜಯಗಳಿಸಿದರು. ಭಾರತದ ವಿದಿತ್ ಗುಜರಾತಿ, ಕೆಚ್ಚೆದೆಯ ಆಟದ ಮೂಲಕ ಸ್ಥಳೀಯ ಫೆವರೀಟ್ ಅರವಿಂದ ಚಿದಂಬರಂ ಜೊತೆ ಡ್ರಾ ಮಾಡಿಕೊಂಡರು.* ಚಾಲೆಂಜರ್ಸ್ ವಿಭಾಗದಲ್ಲಿ ವಿ. ಪ್ರಣವ್, ಯಶಸ್ಸಿನ ಆಟವನ್ನು ಮುಂದುವರಿಸಿ ಕಾರ್ತಿಕೇಯನ್ ಮುರಳಿ ವಿರುದ್ಧ ಜಯ ಸಾಧಿಸಿದರು. ಸತತ ಮೂರನೇ ಜಯದೊಂದಿಗೆ  ಅಗ್ರಸ್ಥಾನದಲ್ಲಿದ್ದಾರೆ.* ಪ್ರಾಣೇಶ್ ಎಂ. ಇನ್ನೊಂದು ಪಂದ್ಯದಲ್ಲಿ ವೈಕಾಲಿ ರಮೇಶಬಾಬು ವಿರುದ್ಧ ಜಯಗಳಿಸಿದರು.