* ವಿಶ್ವಬ್ಯಾಂಕ್‌ನ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ 2019ರಿಂದ 2023ರ ಅವಧಿಯಲ್ಲಿ ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಅಧಿಕವಾಗಿದೆ. ದೇಶದಲ್ಲಿ 2019ರಿಂದ 2023ರ ಅವಧಿಯಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಶೇ.23.4ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. * ಭೂತಾನ್‌ನಲ್ಲಿ ಶೇ.6.3, ಪಾಕಿಸ್ತಾನದಲ್ಲಿ ಶೇ.4.7, ಮಾಲ್ಡೀವ್ಸ್ ನಲ್ಲಿಶೇ.1.7, ನೇಪಾಳದಲ್ಲಿ ಶೇ.1.1, ಬಾಂಗ್ಲಾದೇಶದಲ್ಲಿ ಶೇ.0.3ರಷ್ಟು ಪ್ರಗತಿ ಸಾಧಿಸಿವೆ. ತೀವ್ರ ಆರ್ಥಿಕ ಮುಗ್ಗಟ್ಟಿಗೆ ಗುರಿಯಾಗಿದ್ದ ಶ್ರೀಲಂಕಾದಲ್ಲಿ ಹೆಚ್ಚಿನ ಮಹಿಳೆಯರು ಉದ್ಯೋಗ ತೊರೆದಿದ್ದಾರೆ.* ದಕ್ಷಿಣ ಏಷ್ಯಾದಲ್ಲಿ 2019ರಲ್ಲಿ ಶೇ.27.1ರಷ್ಟಿದ್ದ ಮಹಿಳಾ ಕಾರ್ಮಿಕ ದರ 2023ರ ವೇಳೆಗೆ ಶೇ.31.6ರಷ್ಟು ಏರಿಕೆಯಾಗಿದೆ. ಇದು ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಇರಬೇಕಾಗಿದ್ದ ಶೇ.54ರಷ್ಟು ಮಹಿಳಾ ಉದ್ಯೋಗಿಗಳಿಗಿಂತ ಕಡಿಮೆಯಾಗಿದೆ ಎಂದು ದಕ್ಷಿಣ ಏಷ್ಯಾದ ವಿಶ್ವಬ್ಯಾಂಕ್ ಮುಖ್ಯ ಅರ್ಥಶಾಸ್ತ್ರಜ್ಞ ಫ್ರಾನ್ಸಿಸ್ಟಾ ಓನೋರ್ಜ್ ಹೇಳಿದ್ದಾರೆ.* 2023ರ ಅವಧಿಯಲ್ಲಿ ಭೂತಾನ್ ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರಗಳಲ್ಲಿ ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ ದರ ಕಡಿಮೆಯಾಗಿದೆ. ದಕ್ಷಿಣ ಏಷ್ಯಾದಲ್ಲಿ ಮದುವೆಯ ನಂತರ ಉದ್ಯೋಗದಲ್ಲಿ ತೊಡಗುವ ಸ್ತ್ರೀಯರ ಸಂಖ್ಯೆ ಶೇ.12ರಷ್ಟು ಕುಂಠಿತಗೊಂಡಿದೆ ಎಂದು ವರದಿಯು ತಿಳಿಸಿದೆ.* ಭಾರತದಲ್ಲಿ ಉದ್ಯೋಗದಲ್ಲಿ ಲಿಂಗ ಅಂತರ ಹೆಚ್ಚಿರುವುದರಿಂದ ಉತ್ಪಾದನೆ ಕಡಿಮೆಯಾಗಿದೆ. ಉದ್ಯೋಗದಲ್ಲಿ ಲಿಂಗ ಸಮಾನತೆ ಕಾಯ್ದುಕೊಂಡರೆ ಉತ್ಪಾದನೆಯು ಶೇ.23.42ರಷ್ಟು ಹೆಚ್ಚಳವಾಗುತ್ತದೆ ಎಂದು ವಿಶ್ವ ಬ್ಯಾಂಕ್ ವರದಿ ತಿಳಿಸಿದೆ.