* ಭಾರತದಲ್ಲಿ ಬಾಲ್ಯವಿವಾಹವನ್ನು ನಿಷೇಧಿಸುವ ಕುರಿತು 2023-24ರ ಸಮಗ್ರ ವಾರ್ಷಿಕ ವರದಿಯನ್ನು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ಬಿಡುಗಡೆಗೊಳಿಸಿದೆ.* 2022ರಲ್ಲಿ ದೇಶದಾದ್ಯಂತ ಒಟ್ಟು 1,002 ಬಾಲ್ಯ ವಿವಾಹದ ಪ್ರಕರಣಗಳು ವರದಿಯಾಗಿವೆ ಎಂಬುದನ್ನು ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ ನಡೆಸಿದ ಸಮೀಕ್ಷೆಯು ಹೇಳಿದೆ. 2021ರಲ್ಲಿ ವರದಿಯಾದ ಬಾಲ್ಯ ವಿವಾಹಗಳ ಸಂಖ್ಯೆ 1,050 ಆಗಿತ್ತು. 2022ರಲ್ಲಿ ಕರ್ನಾಟಕದಲ್ಲಿ215 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು, ಬಾಲ್ಯ ವಿವಾಹ ಪ್ರಕರಣಗಳಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ.* ಅಸ್ಸಾಂನಲ್ಲಿ 163 ಪ್ರಕರಣಗಳು, ತಮಿಳುನಾಡಿನಲ್ಲಿ 155 ಪ್ರಕರಣಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ 121 ಪ್ರಕರಣಗಳು ವರದಿಯಾಗಿವೆ.* ಬಾಲ್ಯ ವಿವಾಹಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದರೂ ದೇಶದ 784 ಜಿಲ್ಲೆಗಳ ಪೈಕಿ 596 ಜಿಲ್ಲೆಗಳು ಮಾತ್ರ ಅಗತ್ಯ ಪ್ರತಿಕ್ರಿಯೆ ಸಲ್ಲಿಸಿವೆ. ತಮ್ಮ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿವೆ ಎಂದು ರಾಷ್ಟ್ರೀಯ ಆಯೋಗವು ತಿಳಿಸಿದೆ. * ವರದಿಯನ್ನು ಸಿದ್ದಪಡಿಸಲು ಆಯೋಗವು, ಎಲ್ಲ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳಿಗೆ ಈ ವರ್ಷದ ಮಾರ್ಚ್‌ನಲ್ಲಿ ಪತ್ರ ಬರೆದಿತ್ತು. ಅಲ್ಲದೆ, ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿಗಳು (ಸಿಡಿಪಿಒ), ಮಕ್ಕಳ ಅಭಿವೃದ್ಧಿ ಸಮಿತಿ (ಸಿಡಬ್ಲ್ಯುಸಿ) ಮಕ್ಕಳ ಅಭಿವೃದ್ಧಿ ಪೊಲೀಸ್‌ ಅಧಿಕಾರಿಗಳು (ಸಿಡಬ್ಲ್ಯುಪಿಒ), ಅಂಗನವಾಡಿ ಕಾರ್ಯಕರ್ತೆ ಯರ ಜೊತೆಗೂಡಿ ಬಾಲ್ಯ ವಿವಾಹದ ಕುರಿತು ಜಾಗೃತಿ ಮೂಡಿಸುವಂತೆಯೂ ರಾಜ್ಯಗಳಿಗೆ ಸೂಚನೆ ನೀಡಲಾಗಿತ್ತು.