* ಗಿರೀಶ ಕಾಸರವಳ್ಳಿ ಅವರು ನಿರ್ದೇಶಿಸಿದ ರಾಷ್ಟ್ರಪ್ರಶಸ್ತಿ ವಿಜೇತ 'ಘಟಶ್ರಾದ್ಧ' ಸಿನಿಮಾ ವಿಶ್ವದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಅಗ್ರಸ್ಥಾನ ಪಡೆದ ವೆನಿಸ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ವೆನಿಸ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೂ 'ಘಟಶ್ರಾದ್ಧ' ಭಾಜನವಾಗಿದೆ.*  'ಘಟಶ್ರಾದ್ಧ' ಚಿತ್ರಕ್ಕೆ ಇನ್ನೊಂದು ವಿಶೇಷ ಗರಿ ಸೇರುತ್ತಿದೆ. ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಅಗ್ರಸ್ಥಾನ ಪಡೆದಿರುವ ವೆನಿಸ್ ಚಿತ್ರೋತ್ಸವದಲ್ಲಿ 'ಘಟಶ್ರಾದ್ಧ' ಚಿತ್ರವನ್ನು ವಿಶ್ವ ಸಿನಿಮಾದ ಒಂದು ಕ್ಲಾಸಿಕ್ ಚಿತ್ರ ಎಂದು ಪರಿಗಣಿಸಿ ಪ್ರದರ್ಶಿಸುತ್ತಿದೆ.* 1978 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದ ಸಿನಿಮಾ 'ಘಟಶ್ರಾದ್ಧ'. ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಮೂಡಿಸಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚಿಗೆ ಪಡೆದಿದ್ದ ಚಿತ್ರ 'ಘಟಶ್ರಾದ್ಧ'. ಆ ವರ್ಷದ ರಾಷ್ಟ್ರ್ರ ಪ್ರಶಸ್ತಿ ಸ್ಪರ್ಧೆಯ ರೇಸ್‌ನಲ್ಲಿದ್ದವರು ಘಟಾನುಘಟಿ ಚಿತ್ರ ನಿರ್ದೇಶಕರುಗಳಾದ ಸತ್ಯಜಿತ್ ರೇ, ಮೃಣಾಲ್ ಸೆನ್, ಶ್ಯಾಮ್ ಬೆನೆಗಲ್, ಅಡೂರ್ ಗೋಪಾಲಕೃಷ್ಣನ್, ಅರವಿಂದನ್ ಮತ್ತು ಗಿರೀಶ್‌ ಕಾರ್ನಾಡ್. ಇವರೆಲ್ಲರ ಚಿತ್ರಗಳ ಜೊತೆ ಸ್ಪರ್ಧಿಸಿ ಸ್ವರ್ಣ ಪದಕ ಪಡೆದ ಚಿತ್ರ 'ಘಟಶ್ರಾದ್ಧ'. ಇದು ಗಿರೀಶ್ ಕಾಸರವಳ್ಳಿ ಅವರ ಪ್ರಥಮ ಚಿತ್ರವೂ ಆಗಿದೆ.* ಗಿರೀಶ್ ಕಾಸರವಳ್ಳಿ ಅವರಿಗೆ ಕೇವಲ 26 ವರ್ಷ ವಯಸ್ಸು. ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಘಟಶ್ರಾದ್ಧ' ಚಿತ್ರದ ಕಥಾವಸ್ತು, ದೃಶ್ಯ ಸೌಷ್ಠವಕ್ಕೆ, ಕಲಾತ್ಮಕ ಶಕ್ತಿಗೆ ಸ್ವತಃ ಸತ್ಯಜಿತ್ ರೇ, ಮೃಣಾಲ್ ಸೆನ್, ಅಡೂರ್ ಗೋಪಾಲಕೃಷ್ಣನ್ ಅವರು ಪ್ರಶಂಸಿಸಿದ್ದರು.* ಕೇಂದ್ರ ಸರ್ಕಾರದ ಸಂಸ್ಥೆಯಾದ ಚಲನಚಿತ್ರ ನಿರ್ದೇಶನಾಲಯ 2009ರಲ್ಲಿ ಸಿನಿಮಾದ ಶತಮಾನೋತ್ಸವದ ನೆನಪಿಗಾಗಿ 100 ವರ್ಷದ ಸಿನಿಮಾ ಇತಿಹಾಸದಲ್ಲಿ ತಯಾರಾದ 20 ಭಾರತೀಯ ಶ್ರೇಷ್ಠ ಚಿತ್ರಗಳನ್ನು ಆಯ್ಕೆ ಮಾಡಿತ್ತು. ಅವುಗಳಲ್ಲಿ 'ಘಟಶ್ರಾದ್ಧ' ಚಿತ್ರವೂ ಒಂದು ಎಂದು ಭಾರತೀಯ ಸಿನಿಮಾ ವಿಮರ್ಶಕರು, ನಿರ್ದೇಶಕರು ಆಯ್ಕೆ ಮಾಡಿದ್ದರು. 'ಘಟಶ್ರಾದ್ಧ' ಚಿತ್ರ ನೋಡಿ ಮೆಚ್ಚಿದ್ದ ಹಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕರುಗಳಾದ 'ಟ್ಯಾಕ್ಸಿ ಡ್ರೈವರ್', 'ಡಿಪಾರ್ಟೆಡ್' ಚಿತ್ರ ಖ್ಯಾತಿಯ ಮಾರ್ಟಿನ್ ಸ್ಕಾರ್ಸೆಸ್ಸಿ ಹಾಗೂ 'ಸ್ಟಾರ್ ವಾರ್ಸ್' ಖ್ಯಾತಿಯ ಜಾರ್ಜ್ ಲ್ಯೂಕಾಸ್ ಈ ಚಿತ್ರದ ಪುನರ್ ರೂಪೀಕರಣಕ್ಕೆ ಮುಂದಾಗಿದ್ದರು. 'ಸೆಲ್ಯೂಲಾಯ್ದ್ ಮ್ಯಾನ್' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ನಿರ್ದೇಶಕ ಶಿವೇಂದ್ರ ಸಿಂಗ್ ದುಂಗಾರ್‌ಪುರ್ ಅವರ ಸಿನಿಮಾ ಫೌಂಡೇಶನ್ ಈ ಇಡೀ ಪುನರ್ ನವೀಕರಣದ ರೂವಾರಿಯಾಗಿದ್ದರು.*  ಸಾಮಾನ್ಯವಾಗಿ ಚಿತ್ರೋತ್ಸವದಲ್ಲಿ ಒಂದು ಚಿತ್ರಕ್ಕೆ ಎರಡು ಪ್ರದರ್ಶನಗಳಿರುತ್ತವೆ. ಆದರೆ, 'ಘಟಶ್ರಾದ್ಧ' ಚಿತ್ರಕ್ಕೆ ಮೂರು ಪ್ರದರ್ಶನಗಳಿವೆ. ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರನ್ನು ವಿಶೇಷ ಆಹ್ವಾನ ನೀಡಿ ಕರೆಸಿಕೊಳ್ಳಲಾಗುತ್ತಿದೆ. * ಡಾ ಯು ಆರ್ ಅನಂತ ಮೂರ್ತಿಯವರ ಸಣ್ಣಕತೆ ಆಧರಿಸಿ, ಚಿತ್ರಕಥೆಯನ್ನು ಬರೆದು 'ಘಟಶ್ರಾದ್ಧ' ಚಿತ್ರವನ್ನ ನಿರ್ದೇಶಿಸಿದವರು ಗಿರೀಶ್ ಕಾಸರವಳ್ಳಿ. ಎಸ್ ರಾಮಚಂದ್ರರ ಛಾಯಾಗ್ರಹಣ ಇದ್ದ ಈ ಚಿತ್ರಕ್ಕೆ ಬಿ ವಿ ಕಾರಂತ ಸಂಗೀತ ನೀಡಿದ್ದರು. ಕಲಾನಿರ್ದೇಶನ ಕೆ ವಿ ಸುಬ್ಬಣ್ಣನವರದಾಗಿತ್ತು.