➤ ರಾಜ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಿರುವ ಕರ್ನಾಟಕ ಹೈಕೋರ್ಟ್, ಒಟ್ಟು 369 ನ್ಯಾಯಾಧೀಶರನ್ನು ವರ್ಗಾವಣೆಗೊಳಿಸಿ ಗುರುವಾರ (16-04-2026) ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಪ್ರಮುಖ ನ್ಯಾಯಾಧೀಶರಾಗಿದ್ದ ಸಂತೋಷ್ ಗಜಾನನ ಭಟ್ ಅವರೂ ಸೇರಿರುವುದು ವಿಶೇಷ.➤ ಹೈಕೋರ್ಟ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ವಿವಿಧ ಹಂತದ ನ್ಯಾಯಾಧೀಶರ ವಿವರ ಈ ಕೆಳಗಿನಂತಿದೆ:ಒಟ್ಟು ನ್ಯಾಯಾಧೀಶರು: 369ಜಿಲ್ಲಾ ನ್ಯಾಯಾಧೀಶರು: 115ಹಿರಿಯ ಸಿವಿಲ್ ನ್ಯಾಯಾಧೀಶರು: 115ಸಿವಿಲ್ ನ್ಯಾಯಾಧೀಶರು: 139➤ ಈ ವರ್ಗಾವಣೆಗಳು ಜೂನ್ 1, 2026 ರಿಂದ ಜಾರಿಗೆ ಬರಲಿವೆ ಎಂದು ಹೈಕೋರ್ಟ್ ತಿಳಿಸಿದೆ. ಪ್ರತಿ ವರ್ಷ ಬೇಸಿಗೆ ರಜೆಗೂ ಮುನ್ನ ನಡೆಯುವ ವಾರ್ಷಿಕ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.➤ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಹುದ್ದೆ ಬದಲಾವಣೆ: ಪ್ರಸ್ತುತ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿರುವ ಕೆ.ಎಸ್‌. ಭರತ್‌ಕುಮಾ‌ರ್ ಅವರನ್ನು ಬೆಂಗಳೂರು ನಗರದ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ. ಅವರ ಸ್ಥಾನಕ್ಕೆ (ಹೊಸ ರಿಜಿಸ್ಟ್ರಾ‌ರ್ ಜನರಲ್ ಆಗಿ) ಎಂ.ಚಂದ್ರಶೇಖರ್ ರೆಡ್ಡಿ ಅವರನ್ನು ನಿಯೋಜಿಸಲಾಗಿದೆ.➤ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೊಸ ಸಾರಥಿ: ಸದಾ ಸುದ್ದಿಯಲ್ಲಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರನ್ನು ಬೆಂಗಳೂರಿನ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದ (Karnataka Arbitration Centre) ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ. ಇವರ ಸ್ಥಾನಕ್ಕೆ ಮಂಡ್ಯದ ಒಂದನೇ ಜಿಲ್ಲಾ ನ್ಯಾಯಾಧೀಶರಾಗಿದ್ದ ಕೆ.ಬಿ. ಶಿವಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಮುಂದೆ ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ಕೆ.ಬಿ. ಶಿವಪ್ರಸಾದ್ ನಡೆಸಲಿದ್ದಾರೆ.➤ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ ಹಾಗೂ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಯನ್ನು ಅಪರಾಧಿ ಎಂದು ಸಾರಿದ ಇತಿಹಾಸವಿರುವ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ಹಲವು ಪ್ರಭಾವಿ ರಾಜಕಾರಣಿಗಳ ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ನಿಭಾಯಿಸುವ ಮೂಲಕ "ಜನಪ್ರತಿನಿಧಿಗಳ ಪಾಲಿನ ಸಿಂಹಸ್ವಪ್ನ" ಎಂದೇ ಖ್ಯಾತಿ ಪಡೆದಿದ್ದಾರೆ.