*  ಕೇಂದ್ರ, ಅಸ್ಸಾಂ ಸರ್ಕಾರ ಮತ್ತು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಂ (ಉಲ್ಫಾ) ನಡುವಿನ ತ್ರಿಪಕ್ಷೀಯ ಶಾಂತಿ ಒಪ್ಪಂದಕ್ಕೆ ಇಂದು (ಡಿಸೆಂಬರ್ 30) ದೆಹಲಿಯಲ್ಲಿ ಸಹಿ ಹಾಕಲಾಗಿದೆ. ಈ ಮೂಲಕ ದಶಕಗಳ ಸಂಘರ್ಷ ಕೊನೆಗೊಳಿಸುವಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ.* ಶಾಂತಿ ಒಪ್ಪಂದದ ಮೂಲಕ ಹಿಂಸೆಯಿಂದ ದೂರ ಸರಿಯಲು ಅರಬಿಂದಾ ರಾಜ್‌ಖೋವಾ ನೇತೃತ್ವದ ಉಲ್ಫಾ ಸಂಘಟನೆ ಒಪ್ಪಿಕೊಂಡಿದೆ. ಆದರೆ, ಇದೇ ಸಂಘಟನೆಯ ಪರೇಶ್ ಬರುವಾ ನೇತೃತ್ವದ ಕಟ್ಟರ್ ಬಣ ಶಾಂತಿ ಒಪ್ಪಂದಕ್ಕೆ ಒಪ್ಪಿಲ್ಲ ಎಂದು ತಿಳಿದು ಬಂದಿದೆ.* ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಂ ಅನ್ನು 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ 1990ರಲ್ಲಿ ಭಾರತದಲ್ಲಿ ನಿಷೇಧಿಸಲಾಗಿತ್ತು. ಈ ಸಂಘಟನೆ 1979 ರಿಂದ ಸಶಸ್ತ್ರ ಹೋರಾಟದ ಮೂಲಕ ಸ್ಥಳೀಯ ಅಸ್ಸಾಮಿ ಜನರಿಗೆ ಅಸ್ಸಾಂ ಸಾರ್ವಭೌಮ ರಾಷ್ಟ್ರವನ್ನು ರಚಿಸಲು ಒತ್ತಾಯಿಸುತ್ತಿತ್ತು.