* ವಿಶ್ವ ರೇಬಿಸ್ ದಿನವನ್ನು ಪ್ರತಿವರ್ಷ ಸೆಪ್ಟೆಂಬರ್ 28ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಫ್ರೆಂಚ್ ವಿಜ್ಞಾನಿ ಲೂಯಿಸ್ ಪಾಶ್ಚರ್ ಅವರ ಮರಣ ದಿನದ ನೆನಪಿಗಾಗಿ  ಪ್ರತಿವರ್ಷ ಸೆಪ್ಟೆಂಬರ್ 28ರಂದು ವಿಶ್ವ ರೇಬಿಸ್ ದಿನವನ್ನು ಆಚರಿಸಲಾಗುತ್ತದೆ. * ಲೂಯಿಸ್ ಪಾಶ್ಚರ್ ಮೊದಲ ಬಾರಿಗೆ ರೇಬೀಸ್ ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ವೈದ್ಯಕೀಯ ಜಗತ್ತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ.  ಲೂಯಿಸ್ ಪಾಶ್ಚರ್ ಅವರನ್ನು ಸೂಕ್ಷ್ಮ ಜೀವ ವಿಜ್ಞಾನದ ಪಿತಾಮಹ ಎಂದು ಕರೆಯುತ್ತಾರೆ.* 2024ರ ವಿಶ್ವ ರೇಬಿಸ್ ದಿನದ ಧೇಯವಾಕ್ಯ 'ರೇಬಿಸ್ ಅಡೆತಡೆಗಳನ್ನು ಮುರಿಯುವುದು' (Breaking Rabies Boundaries) ಎಂಬುವುದಾಗಿದೆ. * ವಿಶ್ವ ರೇಬೀಸ್ ದಿನವನ್ನು ಮೊದಲ ಬಾರಿಗೆ 2007ರಲ್ಲಿ ಗ್ಲೋಬಲ್ ಅಲೈಯನ್ಸ್ ಫಾರ್ ರೇಬೀಸ್ ಕಂಟ್ರೋಲ್ (GARC) ಅಚರಿಸಿತು ಮತ್ತು WHO ನಿಂದ ಗುರುತಿಸಲ್ಪಟ್ಟಿದೆ. GARC ಸಮುದಾಯಗಳು ಮತ್ತು ವ್ಯಕ್ತಿಗಳಿಗೆ ಶಿಕ್ಷಣ ನೀಡಲು ಈ ಅಭಿಯಾನವನ್ನು ಪ್ರಾರಂಭಿಸಿತು ಮತ್ತು ಜಾಗತಿಕ ಜಾಗೃತಿಯನ್ನು ಮೂಡಿಸುತ್ತದೆ. * ರೇಬಿಸ್ ಒಂದು ವೈರಲ್ ಕಾಯಿಲೆಯಾಗಿದ್ದು ಮನುಷ್ಯರು, ನಾಯಿ, ಬೆಕ್ಕು, ಎಮ್ಮೆ, ಕುರಿ, ಮೇಕೆ, ಹಂದಿ, ಮತ್ತು ಸಸ್ತನಿಗಳಲ್ಲಿ ಈ ರೋಗ ಕಂಡುಬರುತ್ತದೆ.* ಲಿಸ್ಸಾ ವೈರಸ್ ಕುಟುಂಬಕ್ಕೆ ಸೇರಿದ ರೇಬಿಸ್ ವೈರಸ್‌ನಿಂದ ರೇಬಿಸ್ ರೋಗವು ಉಂಟಾಗುತ್ತದೆ. ರೇಬಿಸ್ ಹೊಂದಿರುವ ಪ್ರಾಣಿಗಳು ತಮ್ಮ ಲಾಲಾರಸದಲ್ಲಿ (ಜೊಲ್ಲು) ಹೆಚ್ಚಿನ ಪ್ರಮಾಣದಲ್ಲಿ ಈ ವೈರಸ್ ಸ್ರವಿಸುತ್ತವೆ. ಆರೋಗ್ಯವಂತ ನಾಯಿಗಳಿಗೆ ಇತರೆ ರೇಬಿಸ್ ರೋಗಪೀಡಿತ ನಾಯಿಗಳು ಕಚ್ಚುವುದರಿಂದ ಈ ರೋಗ ವರ್ಗಾಯಿಸಲ್ಪಡುತ್ತದೆ. ಮನುಷ್ಯರಲ್ಲಿ ಶೇ.99ರಷ್ಟು ರೇಬಿಸ್‌ ಪ್ರಕರಣಗಳು ನಾಯಿಗಳು ಕಚ್ಚುವುದರಿಂದ ಬರುತ್ತದೆ.* ವಿಶ್ವ ರೇಬೀಸ್ ದಿನವು ರೇಬೀಸ್ ಬಗ್ಗೆ ಜನರಿಗೆ ಮಾಹಿತಿ ನೀಡಲು ಅವಕಾಶವನ್ನು ಒದಗಿಸುತ್ತದೆ. ಜನರು ತಮ್ಮನ್ನು ಮತ್ತು ತಮ್ಮ ಸಾಕುಪ್ರಾಣಿಗಳನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ತಿಳಿಸುತ್ತದೆ. * ರೇಬೀಸ್‌ನಲ್ಲಿ ಎರಡು ವಿಧಗಳಿವೆ. 1) ಫ್ಯೂರಿಯಸ್ ರೇಬೀಸ್: ಎನ್ಸೆಫಾಲಿಟಿಕ್ ರೇಬೀಸ್ ಎಂದೂ ಕರೆಯುತ್ತಾರೆ, ಇದು 80% ಮಾನವ ಪ್ರಕರಣಗಳಲ್ಲಿ ಕಂಡುಬರುತ್ತದೆ ಮತ್ತು ರೋಗಿಗಳು ಹೈಡ್ರೋಫೋಬಿಯಾವನ್ನು (ನೀರಿನ ಭಯ) ಹೊಂದಿರುತ್ತಾರೆ. 2) ಪಾರ್ಶ್ವವಾಯು ರೇಬೀಸ್: ಇದನ್ನು ಮೂಕ ರೇಬೀಸ್ ಎಂದೂ ಕರೆಯುತ್ತಾರೆ, ಇದು ಪ್ರಾಥಮಿಕವಾಗಿ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.