* ಶನಿವಾರ (07/09/2024) ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಪ್ಯಾರಾ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಸಿಮ್ರಾನ್ ಶರ್ಮಾ ಮಹಿಳೆಯರ 200 ಮೀಟರ್ ಟಿ12 ವಿಭಾಗದಲ್ಲಿ 24.75 ಸೆಕೆಂಡ್‌ಗಳಲ್ಲಿ ವೈಯಕ್ತಿಕ ಶ್ರೇಷ್ಠ ಗುರಿಯೊಂದಿಗೆ ಐತಿಹಾಸಿಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಕ್ಯೂಬಾದ ಒಮಾರಾ ಡ್ಯುರಾಂಡ್ ಎಲಿಯಾಸ್ 23.62 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಚಿನ್ನದ ಪದಕ ಪಡೆದರು. ವೆನೆಜುವೆಲಾದ ಅಲೆಜಾಂಡ್ರಾ ಪೆರೆಜ್ ಲೋಪೆಜ್ 24.19 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿಗೆ ತೃಪ್ತಿಪಟ್ಟರು.* ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನ ಜಾವೆಲಿನ್ ಥ್ರೋ ಎಫ್41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನವದೀಪ್ ಪ್ಯಾರಾಲಿಂಪಿಕ್ಸ್ನಲ್ಲಿ ಹೊಸ ದಾಖಲೆ ಬರೆದಿದ್ದು ವಿಶೇಷ.* ಟೋಕಿಯೊ 2021 ಪ್ಯಾರಾಲಿಂಪಿಕ್ಸ್ನಲ್ಲಿ ಚೀನಾದ ಪೆಂಗ್‌ಕ್ಸಿಯಾಂಗ್ ಸನ್ 47.13m ದೂರಕ್ಕೆ ಜಾವೆಲಿನ್ ಎಸೆದಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ನವದೀಪ್ ಸಿಂಗ್ 47.32 ಮೀಟರ್ ದೂರಕ್ಕೆ ಎಸೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪ್ಯಾರಾಲಿಂಪಿಕ್ ದಾಖಲೆ ಎಸೆತದೊಂದಿಗೆ ನವದೀಪ್ ಚಿನ್ನದ ಪದಕ ಗೆದ್ದರೆ, ಚೀನಾದ ಸನ್ ಪೆಂಗ್ ಕ್ಸಿಯಾಂಗ್ 44.72 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಬೆಳ್ಳಿ ಪದಕ ಗೆದ್ದರು. ಇನ್ನು ಇರಾಕ್ ನ ವೈಲ್ಡನ್ ನುಖೈಲಾವಿ 40.46 ಮೀಟರ್‌ ದೂರಕ್ಕೆ ಎಸೆದು ಕಂಚಿನ ಪದಕ ಪಡೆದರು.*  ವಿಶೇಷ ಎಂದರೆ ಈ ಸ್ಪರ್ಧೆಯಲ್ಲಿ ಆರಂಭದಲ್ಲಿ ನವದೀಪ್ ಬೆಳ್ಳಿ ಪದಕವನ್ನು ಗೆದ್ದಿದ್ದರು. ಆದರೆ ಇರಾನ್‌ನ ಬೀಟ್ ಸಯಾಹ್ ಸದೇಗ್ ಅವರು ಕ್ರೀಡಾಹೀನ ನಡವಳಿಕೆಗಾಗಿ ಅನರ್ಹಗೊಂಡ ನಂತರ ನವದೀಪ್ ಅವರನ್ನು ಚಿನ್ನ ಪದಕಕ್ಕೆ ಅಪ್‌ಗ್ರೇಡ್ ಮಾಡಲಾಯಿತು. ಈ ಮೂಲಕ ನವದೀಪ್ ಸಿಂಗ್ ಭಾರತಕ್ಕೆ 7ನೇ ಚಿನ್ನದ ಪದಕ ತಂದುಕೊಟ್ಟರು.*  ಭಾರತದ ಪದಕಗಳ ಸಂಖ್ಯೆ 29 ಕ್ಕೆ ಏರಿದೆ. ಇನ್ನು ಕೆಲ ಸ್ಪರ್ಧೆಗಳು ಉಳಿದಿದ್ದು, ಹೀಗಾಗಿ ಈ ಬಾರಿ ಭಾರತೀಯರಿಂದ 30 ಪದಕಗಳನ್ನು ನಿರೀಕ್ಷಿಸಬಹುದು. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚಿನ ಪದಕ ಸೇರಿದಂತೆ 29 ಪದಕಗಳನ್ನು ಗೆದ್ದಿದೆ.