* ಫ್ರಾನ್ಸ್ ಮೂಲದ ಪ್ರಸಿದ್ಧ ಸಫ್ರಾನ್‌ (Safran) ಏರೋ-ಇಂಜಿನ್‌ ಸಂಸ್ಥೆಯ ಹೊಸ ವಿಮಾನ ಎಂಜಿನ್‌ ಘಟಕವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ವರ್ಚುವಲ್‌ ಮೂಲಕ ಉದ್ಘಾಟಿಸಿದರು. ಇವು ಭಾರತೀಯ ವಿಮಾನಯಾನ ವಲಯಕ್ಕೆ ಮಹತ್ವದ ತಂತ್ರಜ್ಞಾನ ಮತ್ತು ಉದ್ಯೋಗಾವಕಾಶಗಳನ್ನು ತರುವುದು ಮಾತ್ರವಲ್ಲದೆ, ದೇಶದ ಏರೋಸ್ಪೇಸ್‌ ಸ್ವಾವಲಂಬನೆಯತ್ತದ ಮಹತ್ತಾದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.* ಈ ಹೊಸ ಘಟಕದಲ್ಲಿ ಮುಖ್ಯವಾಗಿ ವಾಣಿಜ್ಯ ವಿಮಾನಗಳಲ್ಲಿ ಬಳಸಲಾಗುವ LEAP ಎಂಜಿನ್‌ಗಳ ನಿರ್ವಹಣೆ (Maintenance), ದುರಸ್ತಿ (Repair), ಹಾಗೂ ಪರಿಶೀಲನೆ (Overhaul) ಕಾರ್ಯಗಳನ್ನು ನಡೆಸಲಾಗುತ್ತದೆ. LEAP ಎಂಜಿನ್‌ಗಳು ಅತ್ಯಾಧುನಿಕ, ಇಂಧನ ಉಳಿತಾಯ ಮತ್ತು ಕಡಿಮೆ ಮಾಲಿನ್ಯ ಉಂಟುಮಾಡುವ ಸಾಮರ್ಥ್ಯದಿಂದ ವಿಶ್ವದ ಅನೇಕ ವಿಮಾನಯಾನ ಸಂಸ್ಥೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿವೆ. ಇಂತಹ ಎಂಜಿನ್‌ಗಳ MRO ಕಾರ್ಯಗಳು ಭಾರತದಲ್ಲಿ ಆರಂಭವಾಗುವುದರಿಂದ, ದೇಶಕ್ಕೆ ಕೋಟಿ ಕೋಟಿ ರೂ. ವಿದೇಶಿ ವಿನಿಮಯ ಉಳಿವಾಗುವುದು ಮತ್ತು ಭಾರತವನ್ನು ಜಾಗತಿಕ ಏರೋ-ಮೈಂಟನೆನ್ಸ್ ಹಬ್‌ ಆಗಿ ರೂಪಿಸುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.* ಭಾರತದ 5ನೇ ತಲೆಮಾರಿನ ಯುದ್ಧ ವಿಮಾನಗಳಿಗಾಗಿ ಅಗತ್ಯವಿರುವ ಎಂಜಿನ್‌ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಭಾರತಕ್ಕೆ ವರ್ಗಾಯಿಸುವುದಾಗಿ ಸಫ್ರಾನ್‌ ಸಂಸ್ಥೆ ಬದ್ಧತೆ ವ್ಯಕ್ತಪಡಿಸಿದೆ. ಇದು ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ಬೆಳವಣಿಗೆ.* ಈ ತಂತ್ರಜ್ಞಾನ ವರ್ಗಾವಣೆ (Technology Transfer - ToT) ಮೂಲಕ ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ್ ಭಾರತ’ ಉದ್ದೇಶಗಳಿಗೆ ದೊಡ್ಡ ಮಟ್ಟದ ಬಲ ಸಿಗಲಿದೆ. ಭವಿಷ್ಯದ ಯುದ್ಧ ವಿಮಾನಗಳ ತಯಾರಿಕೆ, ಎಂಜಿನ್‌ ಉತ್ಪಾದನೆ ಹಾಗೂ ರಕ್ಷಾ ಸ್ವಾವಲಂಬನೆಗೆ ಇದು ನಿರ್ಣಾಯಕ ಹೆಜ್ಜೆಯಾಗಲಿದೆ.