Job Description: ➤ ದೇಶದ ಅತ್ಯುನ್ನತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ (NEET-UG) ಇನ್ಮುಂದೆ ಸಂಪೂರ್ಣವಾಗಿ ಡಿಜಿಟಲ್ ರೂಪಕ್ಕೆ ಬದಲಾಗಲಿದೆ. ಪರೀಕ್ಷಾ ಅಕ್ರಮಗಳಿಗೆ ಶಾಶ್ವತ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂದಿನ 2027 ರ ಶೈಕ್ಷಣಿಕ ವರ್ಷದಿಂದ ನೀಟ್ ಪರೀಕ್ಷೆಯನ್ನು ಆನ್‌ಲೈನ್ (ಕಂಪ್ಯೂಟರ್ ಆಧರಿತ - CBT) ಮೂಲಕ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶುಕ್ರವಾರ (15-05-2026) ಘೋಷಿಸಿದ್ದಾರೆ.- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT): ಮುಂದಿನ ಶೈಕ್ಷಣಿಕ ವರ್ಷದಿಂದ (2027) ಸಾಂಪ್ರದಾಯಿಕ ಒಎಂಆರ್ (OMR) ಶೀಟ್ ಬದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (Computer Based Test) ನಡೆಸಲಾಗುವುದು.- ರಾಧಾಕೃಷ್ಣನ್ ಸಮಿತಿ ಶಿಫಾರಸು: ಪರೀಕ್ಷಾ ವ್ಯವಸ್ಥೆಯ ಪಾವಿತ್ರ್ಯತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಇಸ್ರೋ ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳ ಅನ್ವಯ ಈ ಸುಧಾರಣೆ ತರಲಾಗುತ್ತಿದೆ.- ಅಕ್ರಮಗಳ ವಿರುದ್ಧ ಶೂನ್ಯ ಸಹಿಷ್ಣುತೆ: ಪರೀಕ್ಷಾ ಮಾಫಿಯಾಗಳ ವಿರುದ್ಧ ಕೇಂದ್ರ ಸರ್ಕಾರ 'ಶೂನ್ಯ ಸಹಿಷ್ಣು' (Zero Tolerance) ನೀತಿಯನ್ನು ಹೊಂದಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಎಚ್ಚರಿಸಿದ್ದಾರೆ.➤ ಹಿನ್ನೆಲೆ ಮತ್ತು ಸಿಬಿಐ (CBI) ತನಿಖೆ: ಕಳೆದ ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಆರಂಭದಲ್ಲಿ ಇದು ಕೇವಲ ವದಂತಿ ಎನ್ನಲಾಯಿತಾದರೂ, ಕೇಂದ್ರ ತನಿಖಾ ಸಂಸ್ಥೆಗಳ ಪ್ರಾಥಮಿಕ ತನಿಖೆಯಲ್ಲಿ ಪತ್ರಿಕೆ ಸೋರಿಕೆಯಾಗಿರುವುದು ದೃಢಪಟ್ಟಿತ್ತು. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮೇ 12 ರಂದು ಇಡೀ ಪರೀಕ್ಷೆಯನ್ನೇ ರದ್ದುಗೊಳಿಸಲಾಗಿತ್ತು. ಪ್ರಸ್ತುತ ಈ ಪ್ರಕರಣದ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ತನಿಖಾ ದಳಕ್ಕೆ (CBI) ವಹಿಸಲಾಗಿದೆ. ➤ ಜೂನ್ 21 ರಂದು 'ನೀಟ್' ಮರು ಪರೀಕ್ಷೆ (NEET Re-Exam): ರದ್ದಾಗಿರುವ ಪ್ರಸ್ತುತ ವರ್ಷದ ನೀಟ್ ಪರೀಕ್ಷೆಯನ್ನು ಜೂನ್ 21 ರಂದು ಮರು ನಡೆಸಲಾಗುವುದು ಎಂದು ಪ್ರಕಟಿಸಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA), ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಯಾವುದೇ ಸುಳ್ಳು ಸುದ್ದಿಗಳನ್ನು ನಂಬದೆ ಕೇವಲ ಅಧಿಕೃತ ಮಾಹಿತಿಯನ್ನಷ್ಟೇ ಪರಿಗಣಿಸುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದೆ.