* ಕರ್ನಾಟಕದಲ್ಲಿ 2013–14ರಿಂದ 2022–23‌ರ ನಡುವಿನ ಅವಧಿಯಲ್ಲಿ ಒಟ್ಟು 73.64 ಲಕ್ಷ ಜನರು ಬಹು ಆಯಾಮಗಳ ಬಡತನದಿಂದ ಹೊರಬಂದಿದ್ದಾರೆ ಎಂದು ನೀತಿ ಆಯೋಗದ ರಾಷ್ಟ್ರೀಯ ಬಹು ಆಯಾಮಗಳ ಬಡತನ ಸೂಚ್ಯಂಕ (ಎಂಪಿಐ) ವರದಿಯು ತಿಳಿಸಿದೆ.* ಪೋಷಕಾಂಶ, ಶಿಶು ಮತ್ತು ಮಕ್ಕಳ ಮರಣ ಪ್ರಮಾಣ, ಗರ್ಭಿಣಿಯರು ಮತ್ತು ತಾಯಂದಿರ ಆರೋಗ್ಯ, ಶಾಲಾ ಶಿಕ್ಷಣ, ಮಕ್ಕಳ ಹಾಜರಾತಿ, ಅಡುಗೆ ಅನಿಲ ಸಂಪರ್ಕ, ನೈರ್ಮಲ್ಯ, ಕುಡಿಯುವ ನೀರು, ವಸತಿ, ವಿದ್ಯುತ್, ಅಸ್ತಿ ಹಾಗೂ ಬ್ಯಾಂಕ್ ಖಾತೆಯನ್ನು ಸೂಚಕಗಳಾಗಿ ಪರಿಗಣಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.* ದೇಶದಲ್ಲಿ ಎಂಪಿಐ ವರದಿ ಪ್ರಕಾರ 2013-14 ರಿಂದ 2022-23 ರ ಅವಧಿಯಲ್ಲಿ ಒಟ್ಟು 24.82 ಕೋಟಿ ಜನರು ಬಡತನದಿಂದ ಹೊರಕ್ಕೆ ಬಂದಿದ್ದಾರೆ ಎಂದು ತಿಳಿಸಿದೆ.* ಕರ್ನಾಟಕದಲ್ಲಿ 2013-2014 ರಲ್ಲಿ ಶೇ 16.55 ರಷ್ಟಿದ್ದ ಬಡತನ ಪ್ರಮಾಣವು 2022-23 ರಲ್ಲಿ 5.67 ಕ್ಕೆ ಇಳಿಕೆಯಾಗಿದೆ. * 2005-06ರಲ್ಲಿ ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ 46.71ರಷ್ಟು ಬಡವರಿದ್ದರು. ಬಡತನದ ಪ್ರಮಾಣವು 2015-16 ರಲ್ಲಿ 12.77 ಹಾಗೂ 2019-21 ರಲ್ಲಿ ಶೇ 7.58 ರಷ್ಟು ಇಳಿಕೆಯಾಗಿದೆ.* ಕರ್ನಾಟಕ ಸೇರಿದಂತೆ ದೇಶದಲ್ಲಿ ಒಂಬತ್ತು ವರ್ಷಗಳ ಅವಧಿಯಲ್ಲಿ 24.82 ಕೋಟಿ ಜನರು ಬಡತನದಿಂದ ಹೊರಬರಲು ಸಾಧ್ಯವಾಗಿದೆ ಎಂದು ವರದಿ ತಿಳಿಸಿದೆ.* ಪೋಷನ್ ಅಭಿಯಾನ, ರಕ್ತಹೀನತೆ ಮುಕ್ತ ಭಾರತ, ಆಹಾರದ ಭದ್ರತೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಹಲವು ಅಭಿವೃದ್ಧಿ ಕಾರ್ಯಗಳು ಬಡತನದ ನಿರ್ಮೂಲನೆಗೆ ಸಹಕಾರಿಯಾಗಿವೆ ಎಂದು ವರದಿ ತಿಳಿಸಿದೆ.* ದೇಶದ 14 ಲಕ್ಷ ಅಂಗನವಾಡಿ ಕೇಂದ್ರಗಳ ಮೂಲಕ ಸಮರ್ಪಕವಾಗಿ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. 6 ವರ್ಷದೊಳಗಿನ 8.87 ಕೋಟಿ ಮಕ್ಕಳು, 1.1 ಕೋಟಿ ಗರ್ಭಿಣಿಯರು ಮತ್ತು ತಾಯಂದಿರು ಸರ್ಕಾರದ ಆರೋಗ್ಯ ಯೋಜನೆಗಳ ಪ್ರಯೋಜನ ಪಡೆದಿದ್ದಾರೆ ಎಂದು ವಿವರಿಸಿದೆ.* ಉಜ್ವಲ ಯೋಜನೆಯಡಿ ದೇಶದಲ್ಲಿ 10 ಕೋಟಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಕಲ್ಪಿಸಲಾಗಿದೆ. ಹೊಗೆ ಮುಕ್ತ ಅಡುಗೆ ಮನೆ ಆಶಯ ಸಾಕಾರಗೊಂಡಿದೆ. ಮಹಿಳೆಯರ ಆರೋಗ್ಯದ ಸುಧಾರಣೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದೆ.* ಸ್ವಚ್ಛ ಭಾರತ್ ಮಿಷನ್, ಜಲಜೀವನ್ ಮಿಷನ್‌ನಡಿ ನೈರ್ಮಲ್ಯಕ್ಕೆ ಒತ್ತು ನೀಡಲಾಗಿದೆ. ದೇಶದಲ್ಲಿ 14 ಕೋಟಿ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 11.33 ಕೋಟಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದೆ.* ಪ್ರಧಾನ ಮಂತ್ರಿ ಜನಧನ ಯೋಜನೆಯಡಿ 50 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಆ ಮೂಲಕ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಹಕಾರಿಯಾಗಿದೆ. * ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 4 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ ಎಂದು ವರದಿ ವಿವರಿಸಿದೆ.