* ಕರ್ನಾಟಕದ ಮುಧೋಳ ಹೌಂಡ್‌ ಹಾಗೂ ಉತ್ತರ ಪ್ರದೇಶದ ರಾಮ್‌ಪುರ ಎಂಬ ದೇಸಿ ತಳಿಯ 150 ನಾಯಿಗಳಿಗೆ ಇದೇ ಮೊದಲ ಬಾರಿಗೆ ಗಡಿ ರಕ್ಷಣಾ ಪಡೆ (BSF) ತರಬೇತಿ ನೀಡುತ್ತಿದೆ.* ಭಾರತದ ಪೂರ್ವ ಹಾಗೂ ಪಶ್ಚಿಮ ಭಾಗದ ಗಡಿಗಳಲ್ಲಿ ಮತ್ತು ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಕೈಗೊಳ್ಳುವ ಅತ್ಯಂತ ಅಪಾಯಕಾರಿ ಕಮಾಂಡೊ ಕಾರ್ಯಾಚರಣೆಯಲ್ಲಿ ಈ ಎರಡು ತಳಿಯ ನಾಯಿಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ವರದಿಯಾಗಿದೆ.* ಮಧ್ಯಪ್ರದೇಶದ ಟೆಕಾನ್ಪುರ ಎಂಬಲ್ಲಿರುವ ಬಿಎಸ್‌ಎಫ್‌ನ ರಾಷ್ಟ್ರೀಯ ತರಬೇತಿ ಕೇಂದ್ರಕ್ಕೆ 2018ರಲ್ಲಿ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಸಿ ತಳಿಗಳನ್ನು ಸೇನೆಯಲ್ಲಿ ನಿಯೋಜಿಸಿಕೊಳ್ಳಲು ಸಲಹೆ ನೀಡಿದ್ದರು. ಅದರಂತೆಯೇ ದೇಸಿ ಶ್ವಾನ ತಳಿಗಳನ್ನು ಅನ್ವೇಷಣೆಗೆ ಬಿಎಸ್‌ಎಫ್‌ ಯೋಜನೆಯೊಂದನ್ನು ರೂಪಿಸಿತು.* ಮುಧೋಳ ಹೌಂಡ್‌ ಅನ್ನು ಕ್ಯಾರಾವಾನ್ ಹೌಂಡ್ ಎಂದೂ ಕರೆಯಲಾಗುತ್ತದೆ. ದಕ್ಕನ್‌ ಪ್ರಸ್ತಭೂಮಿ ಅದರಲ್ಲೂ ಕರ್ನಾಟಕದ ತಳಿಯಾದ ಇದು ತನ್ನ ವೇಗ ಹಾಗೂ ತೀಕ್ಷ್ಣ ದೃಷ್ಟಿ ಶಕ್ತಿಯಿಂದಾಗಿ ಮರಾಠಾ ಸೇನೆಯಲ್ಲಿ ಸ್ಥಾನ ಪಡೆದಿತ್ತು.* ಸಪೂರ ದೇಹ, ಹೆಚ್ಚಿನ ಶಕ್ತಿ ಮತ್ತು ಆಕರ್ಷಕ ತಳಿಯಾದ ಮುಧೋಳ ಹೌಂಡ್‌ ತೀಕ್ಷ್ಣ ಇಂದ್ರೀಯಗಳನ್ನು ಹೊಂದಿದೆ. ಅದರಲ್ಲೂ ಚುರುಕುತನ ಮತ್ತು ಜಾಗರೂಕತೆಯಲ್ಲಿ ಇದಕ್ಕೆ ಸಾಟಿ ಬೇರೊಂದಿಲ್ಲ. ಈ ತಳಿಯ ನಾಯಿಗಳಿಗೆ ತರಬೇತಿ ನೀಡುವುದು ಸುಲಭ. ಭದ್ರತಾ ಕಾರ್ಯಾಚರಣೆಯಲ್ಲಿ ಎತ್ತಿದ ಕೈ.* ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 2025ರಲ್ಲಿ ಬಿಡುಗಡೆ ಮಾಡಿದ ಅಂಚೆ ಚೀಟಿಯಲ್ಲಿ ಮುದ್ರಣಗೊಂಡ ನಾಲ್ಕು ದೇಸಿ ನಾಯಿಗಳಲ್ಲಿ ಮುಧೋಳ ಹೌಂಡ್‌ ಕೂಡಾ ಒಂದು. ಆ ಮೂಲಕ ದೇಸಿ ಶ್ವಾನ ತಳಿಗಳಿಗೆ ಗೌರವ ಸಲ್ಲಿಸಲಾಯಿತು.* ರಾಮ್‌ಪುರ ಹೌಂಡ್‌:* ಉತ್ತರ ಪ್ರದೇಶದ ರಾಮ್‌ಪುರ ತಳಿಯ ನಾಯಿಗಳನ್ನು ಹಿಂದೆ ಮೊಘಲರು ಹಾಗೂ ಸ್ಥಳೀಯ ರಾಜರು ಇವುಗಳನ್ನು ಯುದ್ಧಗಳಲ್ಲಿ, ಬೇಟೆಗಳಲ್ಲಿ ಬಳಸಿದ ಇತಿಹಾಸಗಳಿವೆ. ಅದರಲ್ಲೂ ತೋಳ, ನರಿ ಹಾಗೂ ಚಿರತೆಗಳನ್ನು ಬೇಟೆಯಾಡಲು ಈ ತಳಿಯ ನಾಯಿಗಳನ್ನು ಬಳಸಿದ ಉದಾಹರಣೆಗಳಿವೆ.* ಎತ್ತರದ ನಿಲುವು, ಶಕ್ತಿಶಾಲಿ ದೇಹ, ಚುರುಕುತನ ಹಾಗೂ ಸುಸ್ತಿಲ್ಲದ ಬಹುದೂರ ಓಡುವ ಸಾಮರ್ಥ್ಯ ಇದರ ಲಕ್ಷಣಗಳು. ಧೈರ್ಯ, ಬದ್ಧತೆ, ಬುದ್ಧಿಶಕ್ತಿ ಹಾಗೂ ಸೂಕ್ಷ್ಮ ಗುಣದಿಂದಾಗಿ ಇವುಗಳನ್ನು ತರಬೇತುಗೊಳಿಸುವುದು ಸುಲಭ. ವೇಗ, ತಾಕತ್ತು ಮತ್ತು ಭಯವಿಲ್ಲದ ವರ್ತನೆಯಿಂದ ಈ ತಳಿಯನ್ನು ಬಿಎಸ್‌ಎಫ್‌ ಆಯ್ಕೆ ಮಾಡಿತು.* ಕುಟುಂಬದೊಂದಿಗೆ ಹೆಚ್ಚು ಪ್ರೀತಿ ಹಾಗೂ ಒಡನಾಟ ಹೊಂದುವ ಗುಣವುಳ್ಳ ರಾಮ್‌ಪುರ ತಳಿಯ ಶ್ವಾನಗಳು, ಅಪರಿಚಿತರ ಪಾಲಿಗೆ ಅಪಾಯವೇ ಸರಿ. 12ರಿಂದ 14 ವರ್ಷಗಳ ಜೀವಿತಾವಧಿಯನ್ನು ಈ ತಳಿ ಹೊಂದಿವೆ. ಆರೋಗ್ಯವಾಗಿರಬೇಕೆಂದರೆ ದೈಹಿಕ ಮತ್ತು ಮಾನಸಿಕ ವ್ಯಾಯಾಮ ನಿತ್ಯ ಅಗತ್ಯ.