➤ ಏಪ್ರಿಲ್ 15, 2026 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಐತಿಹಾಸಿಕ ಆದಿಚುಂಚನಗಿರಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಪರಮಪೂಜ್ಯ  ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸ್ಮರಣಾರ್ಥ ನಿರ್ಮಿಸಲಾದ 'ಶ್ರೀಗುರು ಭೈರವೈಕ್ಯ ಮಂದಿರ'ವನ್ನು (ಗದ್ದಿಗೆ) ಲೋಕಾರ್ಪಣೆ ಮಾಡಲಿದ್ದಾರೆ. ಇದು ಮಂಡ್ಯಕ್ಕೆ ಅವರ ಮೂರನೇ ಭೇಟಿಯಾಗಿದ್ದು, ರಾಜಕೀಯ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಈ ಬಾರಿ ಸಂಪೂರ್ಣ ಧಾರ್ಮಿಕ ಮತ್ತು ಸಾಂಸ್ಕೃತಿಕ ಉದ್ದೇಶಗಳಿಗಾಗಿ ಅವರು ಆಗಮಿಸುತ್ತಿರುವುದು ವಿಶೇಷವಾಗಿದೆ. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಸಾರ್ವಜನಿಕ ಸಭೆಯೂ ನಡೆಯಲಿದ್ದು, ಭದ್ರತೆಗಾಗಿ ಜಿಲ್ಲಾಡಳಿತವು ಈಗಾಗಲೇ ಎಲ್ಲಾ ಪೂರ್ವಸಿದ್ಧತೆಗಳನ್ನು ಕೈಗೊಂಡಿದೆ.➤ ಮಂಡ್ಯಕ್ಕೆ ಮೋದಿಯವರ 3ನೇ ಭೇಟಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತಿರುವುದು ಇದು ಮೂರನೇ ಬಾರಿ.1.ಮೊದಲ ಭೇಟಿ: ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ್ದರು.2.ಎರಡನೇ ಭೇಟಿ: ಪ್ರಧಾನಿಯಾದ ಬಳಿಕ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗಾಗಿ ಮಂಡ್ಯಕ್ಕೆ ಬಂದಿದ್ದರು.3.ಮೂರನೇ ಭೇಟಿ: ಈಗ ಆದಿಚುಂಚನಗಿರಿ ಮಠದ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಆಗಮಿಸುತ್ತಿದ್ದಾರೆ.➤ ಕಾರ್ಯಕ್ರಮದ ವಿವರ: ಬೆಳಿಗ್ಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿ ಬೆಳಿಗ್ಗೆ 10:50ಕ್ಕೆ ಆದಿಚುಂಚನಗಿರಿ ಹೆಲಿಪ್ಯಾಡ್ ತಲುಪಲಿದ್ದು, ತದನಂತರ 11:00 ಗಂಟೆಗೆ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ನೂತನ ಗದ್ದಿಗೆಯನ್ನು ಲೋಕಾರ್ಪಣೆ ಮಾಡಿದ ಬಳಿಕ ಮಠದ ಆವರಣದ ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಬೃಹತ್ ಭಕ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.➤ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸೇರಿದಂತೆ ಹಲವು ರಾಜಕೀಯ ಮತ್ತು ಧಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ.