* ಭಾರತೀಯ ನೌಕಾದಳದ ಕರಾವಳಿ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ದೇಶೀಯವಾಗಿ ನಿರ್ಮಿಸಲಾದ ಜಲಾಂತರ್ಗಾಮಿ-ನಿರೋಧಕ ಕರಾವಳಿ ಸಮರ ನೌಕೆ (Anti-Submarine Warfare Shallow Water Craft - ASW SWC) ಸರಣಿಯ ಮೊದಲ ನೌಕೆಯಾದ 'ಮಾಹೇ' ಯಶಸ್ವಿಯಾಗಿ ಸೇವೆಗೆ ಸೇರ್ಪಡೆಗೊಂಡಿದೆ.* 'ಮಾಹೇ' ನೌಕೆಯನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ನಿಂದ ಭಾರತೀಯ ನೌಕಾದಳಕ್ಕೆ ಗುರುವಾರ (ಅಕ್ಟೋಬರ್ 23, 2025) ಹಸ್ತಾಂತರಿಸಲಾಯಿತು.* ಭಾರತೀಯ ನೌಕಾಪಡೆಗೆ ಒದಗಿಸಲಾಗುತ್ತಿರುವ ಎಂಟು ASW SWC ಹಡಗುಗಳ ಸರಣಿಯಲ್ಲಿ 'ಮಾಹೇ' ಮೊದಲನೆಯದಾಗಿದೆ.* ಈ ಸಮರ ನೌಕೆಯು ಸಂಪೂರ್ಣವಾಗಿ ದೇಶೀಯವಾಗಿ (Indigenous) ವಿನ್ಯಾಸ ಮತ್ತು ನಿರ್ಮಾಣಗೊಂಡಿದೆ. ಇದು ಭಾರತ ಸರ್ಕಾರದ 'ಆತ್ಮನಿರ್ಭರ ಭಾರತ' (Aatmanirbhar Bharat) ಯೋಜನೆಯಡಿ ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುತ್ತಿರುವುದಕ್ಕೆ ಒಂದು ಮಹತ್ವದ ನಿದರ್ಶನವಾಗಿದೆ. ಶೇ. 80 ಕ್ಕಿಂತಲೂ ಹೆಚ್ಚಿನ ಉಪಕರಣಗಳು ದೇಶೀಯವಾಗಿ ತಯಾರಾಗಿವೆ.* ಆಳವಿಲ್ಲದ ನೀರಿನ ಪ್ರದೇಶದಲ್ಲಿ (Shallow Water) ಶತ್ರು ಜಲಾಂತರ್ಗಾಮಿ ನೌಕೆಗಳನ್ನು (Submarine) ಪತ್ತೆಹಚ್ಚಲು ಮತ್ತು ನಾಶಪಡಿಸಲು ಈ ನೌಕೆಯನ್ನು ಸಜ್ಜುಗೊಳಿಸಲಾಗಿದೆ. ಮತ್ತು ಸಮುದ್ರದಲ್ಲಿ ನಿರಂತರ ಕಣ್ಗಾವಲು (Surveillance) ಮತ್ತು ಪೆಟ್ರೋಲಿಂಗ್ ಕಾರ್ಯಗಳನ್ನು ನಿರ್ವಹಿಸುವುದು.* ಕೊಚ್ಚಿನ್ ಶಿಪ್‌ಯಾರ್ಡ್‌ನ ನಿರ್ದೇಶಕರು (ಕಾರ್ಯಾಚರಣೆ) ಆದ ಎಸ್. ಹರಿಕೃಷ್ಣನ್ ಮತ್ತು 'ಮಾಹೇ' ನೌಕೆಯ ಕಮಾಂಡಿಂಗ್ ಆಫೀಸರ್ (ನಾಮನಿರ್ದೇಶಿತ) ಆದ ಕಮಾಂಡರ್ ಅಮಿತ್ ಚಂದ್ರ ಚೌಬೆ ಅವರು ಔಪಚಾರಿಕವಾಗಿ ಹಸ್ತಾಂತರ ದಾಖಲೆಗಳಿಗೆ ಸಹಿ ಹಾಕಿದರು. ಈ ಮೂಲಕ 'ಮಾಹೇ' ಅಧಿಕೃತವಾಗಿ ಭಾರತೀಯ ನೌಕಾಪಡೆಯ ಭಾಗವಾಯಿತು. ಮುಂದಿನ ದಿನಗಳಲ್ಲಿ ಉಳಿದ ಏಳು ASW SWC ನೌಕೆಗಳು ಸಹ ಹಂತ ಹಂತವಾಗಿ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.