➤ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯವಾದ ಶರಾವತಿ ಕಣಿವೆ ಸಿಂಹ ಬಾಲದ ಕೋತಿ ಅಭಯಾರಣ್ಯದಲ್ಲಿ ಉದ್ದೇಶಿತ 2,000 ಮೆಗಾವ್ಯಾಟ್ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಯಾವುದೇ ಭೂಮಟ್ಟದ ಚಟುವಟಿಕೆಗಳನ್ನು ನಡೆಸದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಪೀಠವು, ಪರಿಸರ ಮತ್ತು ಅಪರೂಪದ ವನ್ಯಜೀವಿಗಳ ರಕ್ಷಣೆಯ ಹಿತದೃಷ್ಟಿಯಿಂದ ಈ ಆದೇಶ ಹೊರಡಿಸಿದ್ದು, ಜೂನ್ 10ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ. ಯೋಜನೆಯಿಂದಾಗಿ ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆಗೆ ಹಾಗೂ ಅಳಿವಿನಂಚಿನಲ್ಲಿರುವ ಸಿಂಹ ಬಾಲದ ಕೋತಿಗಳ ಆವಾಸಸ್ಥಾನಕ್ಕೆ ಹಾನಿಯಾಗಲಿದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.➤ ಪ್ರಕರಣದ ಹಿನ್ನೆಲೆ: ಪರಿಸರ ಸಂರಕ್ಷಣಾ ಕಾರ್ಯಕರ್ತರಾದ ಅಖಿಲೇಶ್ ಚಿಪ್ಲಿ, ಡಾ. ರವೀಂದ್ರನಾಥ ಶಾನುಭಾಗ್ ಮತ್ತು ಮನೋಹರ್ ಕುಮಾರ್ ಸಿ.ಬಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ರಾಜ್ಯ ವನ್ಯಜೀವಿ ಮಂಡಳಿಯು 2025ರ ಜನವರಿಯಲ್ಲಿ ಈ ಯೋಜನೆಗೆ ನೀಡಿದ್ದ ಅನುಮೋದನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು."ಅಪಾಯದ ಅಂಚಿನಲ್ಲಿರುವ ಸಿಂಹ ಬಾಲದ ಕೋತಿಗಳ ಆವಾಸಸ್ಥಾನವನ್ನು ನಾಶಪಡಿಸುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ." - ಹೈಕೋರ್ಟ್ ಅಭಿಪ್ರಾಯ➤ ಸಿಂಹ ಬಾಲದ ಕೋತಿ: ಇದು ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾಗಿರುವ (Endemic) ಪ್ರೈಮೇಟ್ ತಳಿ. ಇವುಗಳು ಹೆಚ್ಚಾಗಿ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಚಾವಣಿಯಲ್ಲಿ (Canopy) ವಾಸಿಸುತ್ತವೆ. IUCN ಸ್ಥಿತಿ: ಅಪಾಯದ ಅಂಚಿನಲ್ಲಿರುವ ತಳಿ (Endangered). ➤ ಶರಾವತಿ ಅಭಯಾರಣ್ಯ: ಇದು ಯುನೆಸ್ಕೊ (UNESCO) ಘೋಷಿಸಿರುವ ವಿಶ್ವ ಪಾರಂಪರಿಕ ತಾಣವಾದ ಪಶ್ಚಿಮ ಘಟ್ಟಗಳ ಭಾಗವಾಗಿದೆ. ಇಲ್ಲಿ ಉಷ್ಣವಲಯದ ನಿತ್ಯ ಹರಿದ್ವರ್ಣ ಕಾಡುಗಳು, ಸವನ್ನಾ ಹುಲ್ಲುಗಾವಲುಗಳು ಕಂಡುಬರುತ್ತವೆ. ಪ್ರಮುಖ ಸಸ್ಯ ಪ್ರಭೇದಗಳು: ಧೂಪ, ಗುಲ್ಬಾವು, ಸುರಹೊನ್ನೆ, ಮಾವು ಮತ್ತು ನಂದಿ.➤ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972: ಇದರ ಕಲಂ 29ರ ಅನ್ವಯ, ವನ್ಯಜೀವಿಗಳ ಹಿತದೃಷ್ಟಿಯಿಂದ ಹೊರತುಪಡಿಸಿ ಅಭಯಾರಣ್ಯದೊಳಗೆ ಯಾವುದೇ ವಿನಾಶಕಾರಿ ಚಟುವಟಿಕೆಗಳನ್ನು ನಡೆಸುವಂತಿಲ್ಲ.