Job Description: * ಫುಕುಶಿಮಾ ಅಣು ದುರಂತದ ಬಳಿಕ ಸುಮಾರು 15 ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಜಪಾನ್‌ನ ವಿಶ್ವದ ಅತಿದೊಡ್ಡ ಅಣು ವಿದ್ಯುತ್ ಸ್ಥಾವರವಾದ ಕಾಶಿವಾಜಾಕಿ–ಕರಿವಾ ಅನ್ನು ಪುನರಾರಂಭಿಸಲು ಜಪಾನ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನಿಗಾಟಾ ಪ್ರಾಂತ್ಯದ ವಿಧಾನಸಭೆಯ ಬೆಂಬಲದೊಂದಿಗೆ ಈ ಸ್ಥಾವರ ಪುನರಾರಂಭಕ್ಕೆ ಅಧಿಕೃತ ದಾರಿ ತೆರೆಯಲಾಗಿದೆ.*ಟೋಕಿಯೊದಿಂದ ಸುಮಾರು 220 ಕಿಮೀ ದೂರದಲ್ಲಿರುವ ಈ ಸ್ಥಾವರವು 2011ರ ಭೂಕಂಪ ಮತ್ತು ಸುನಾಮಿಯಿಂದ ಉಂಟಾದ ಫುಕುಶಿಮಾ ದುರಂತದ ನಂತರ ಸ್ಥಗಿತಗೊಂಡಿದ್ದ 54 ಅಣು ರಿಯಾಕ್ಟರ್‌ಗಳ ಪೈಕಿ ಒಂದಾಗಿತ್ತು. ಜಪಾನ್ ಈಗಾಗಲೇ ಕಾರ್ಯನಿರ್ವಹಣೆಗೆ ಯೋಗ್ಯವಾಗಿರುವ 33 ರಿಯಾಕ್ಟರ್‌ಗಳಲ್ಲಿ 14 ಅನ್ನು ಮರುಪ್ರಾರಂಭಿಸಿದೆ. ಕಾಶಿವಾಜಾಕಿ–ಕರಿವಾ ಸ್ಥಾವರವು ಫುಕುಶಿಮಾ ಘಟಕವನ್ನು ನಡೆಸಿದ್ದ ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪನಿ (TEPCO) ನಿರ್ವಹಣೆಯಲ್ಲಿರುವ ಮೊದಲ ಪುನರಾರಂಭಗೊಳ್ಳುವ ಘಟಕವಾಗಲಿದೆ.* ಒಟ್ಟು 8.2 ಗಿಗಾವಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಈ ಸ್ಥಾವರವು ಲಕ್ಷಾಂತರ ಮನೆಗಳಿಗೆ ವಿದ್ಯುತ್ ಪೂರೈಸುವ ಶಕ್ತಿಯಿದೆ. ಇಂಧನ ಆಮದು ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಜಪಾನ್ ಅಣುಶಕ್ತಿಯತ್ತ ಮತ್ತೆ ಮುಖ ಮಾಡುತ್ತಿದೆ.* ಆದರೆ, ಈ ನಿರ್ಧಾರಕ್ಕೆ ಸ್ಥಳೀಯ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಸುರಕ್ಷತೆ ಕುರಿತ ಆತಂಕ ಇನ್ನೂ ಮುಂದುವರಿದಿದೆ. ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಲಾಭಗಳ ಭರವಸೆ ನೀಡಿದರೂ, ಅಣು ಅಪಾಯಗಳ ಭೀತಿ ಜನರಲ್ಲಿ ಕಡಿಮೆಯಾಗಿಲ್ಲ. ಈ ಬೆಳವಣಿಗೆ ಜಪಾನ್‌ನ ಇಂಧನ ನೀತಿಯಲ್ಲಿ ಮಹತ್ವದ ತಿರುವಾಗಿ ಪರಿಗಣಿಸಲಾಗಿದೆ.