* ಸೆ.9 ಮತ್ತು 10 ರಂದು ದೆಹಲಿಯಲ್ಲಿ ನಡೆಯುವ ಜಿ - 20 ಶೃಂಗ ಸಭೆಗೆ ಆಗಮಿಸುವ ವಿದೇಶಿ ಗಣ್ಯರಿಗೆ ನೀಡಲು ಕೇಂದ್ರ ಸರ್ಕಾರವು ಎರಡು ಕಿರು ಪುಸ್ತಕಗಳನ್ನು ಬಿಡುಗಡೆ ಮಾಡಿದೆ.* ಈ ಕಿರು ಪುಸ್ತಕಗಳ ಹೆಸರು ‘ಭಾರತ, ಪ್ರಜಾಪ್ರಭುತ್ವದ ತಾಯಿ’ ಹಾಗೂ ‘ಭಾರತದಲ್ಲಿ ಚುನಾವಣೆಗಳು’ ಎಂಬ ಎರಡು ಕಿರು ಪುಸ್ತಕಗಳನ್ನು ಸಿದ್ದಪಡಿಸಲಾಗಿದೆ. ಈ ಕೈಪಿಡಿಗಳಲ್ಲಿ ಭಾರತದ ಇತಿಹಾಸವು ಕ್ರಿಸ್ತ ಪೂರ್ವ 6 ಸಾವಿರಕ್ಕಿಂತಾ ಹಳೆಯದು ಎಂದು ವಿವರಿಸಲಾಗಿದೆ. ಈ ಎರಡೂ ಪುಸ್ತಕಗಳನ್ನು ಜಿ - 20 ಶೃಂಗ ಸಭೆಗೆ ಆಗಮಿಸುವ ವಿದೇಶಿ ಗಣ್ಯರಿಗೆ ನೀಡಲು ಸಿದ್ದತೆ ನಡೆದಿದೆ.* ಮೊದಲನೇ ಪುಸ್ತಕ ‘ಭಾರತ, ಪ್ರಜಾಪ್ರಭುತ್ವದ ತಾಯಿ’ ಎಂಬ ಪುಸ್ತಕವು 26 ಪುಟ ಇದೆ. ಈ ಪುಸ್ತಕದಲ್ಲಿ ನೃತ್ಯಗಾರ್ತಿಯ ಫೋಟೋ ಮುಖಪುಟದಲ್ಲಿದೆ. ಆತ್ಮ ವಿಶ್ವಾಸದಿಂದ ನಿಂತು ವಿಶ್ವವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಸ್ವತಂತ್ರದ ಸಂಕೇತವಾಗಿರುವ 5 ಸಾವಿರ ವರ್ಷಗಳಷ್ಟು ಹಳೆಯ ಕಂಚಿನ ಪ್ರತಿಮೆ ಇದು ಎಂದು ವಿವರಿಸಲಾಗಿದೆ.* ಎರಡನೇ ಪುಸ್ತಕ ‘ಭಾರತದಲ್ಲಿ ಚುನಾವಣೆಗಳು’ ಎಂಬ ಪುಸ್ತಕವು 15 ಪುಟಗಳಿದ್ದು, ಈ ಪುಸ್ತಕದಲ್ಲಿ ಭಾರತ ಈವರೆಗೂ ಕಂಡ ಎಲ್ಲ ಸಾರ್ವತ್ರಿಕ ಚುನಾವಣೆಗಳ ವಿವರ ಇದೆ. 1951 ರಿಂದ 2019ರ ಚುನಾವಣೆವರೆಗೆ ಎಷ್ಟು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು, ಯಾವ ಪಕ್ಷದ ಪ್ರಾಬಲ್ಯ ಸೇರಿದಂತೆ ಎಲ್ಲ ವಿಚಾರಗಳ ಉಲ್ಲೇಖವಿದ್ದು, ಭಾರತದಲ್ಲಿ ಪ್ರಜಾಪ್ರಭುತ್ವ ಅಭಿವೃದ್ದಿ ಕಂಡ ಬಗೆಯನ್ನು ವಿವರಿಸಲಾಗಿದೆ.* ಈ ಎರಡೂ ಕಿರು ಪುಸ್ತಕಗಳ ಸಾಫ್ಟ್ ಕಾಪಿ ಜಿ - 20 ಅಧಿಕೃತ ವೆಬ್‌ಸೈಟ್‌ನಲ್ಲೂ ಅಪ್‌ಲೋಡ್ ಮಾಡಲಾಗಿದೆ. ಎರಡೂ ಪುಸ್ತಕಗಳು ಒಟ್ಟು 40 ಪುಟಗಳನ್ನು ಒಳಗೊಂಡಿದೆ. ಈ ಪುಸ್ತಕಗಳಲ್ಲಿ ರಾಮಾಯಣ, ಮಹಾಭಾರತ, ಛತ್ರಪತಿ ಶಿವಾಜಿ, ಅಕ್ಬರ್ ಹಾಗೂ ಭಾರತದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳ ಬಗ್ಗೆ ವಿವರ ಇದೆ.* ಭಾರತದ ಜನತೆಗೆ ಶತ ಶತಮಾನಗಳಿಂದಲೂ ಪ್ರಜಾಪ್ರಭುತ್ವದ ನೈತಿಕತೆ ಇತ್ತು ಎಂಬುದನ್ನು ಈ ಪುಸ್ತಕಗಳಲ್ಲಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ.