Job Description: ➤ ಭಾರತ ಸರ್ಕಾರವು ದೇಶದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಯೊಂದನ್ನು ತರಲು ಸಜ್ಜಾಗಿದೆ. ಕೈಗಾರಿಕಾ ವಲಯದ ಬೆಳವಣಿಗೆಯನ್ನು ಅಳೆಯಲು 'ಐಐಪಿ' (IIP - Index of Industrial Production) ಇರುವಂತೆಯೇ, ಸೇವಾ ವಲಯದ ಪ್ರಗತಿಯನ್ನು ಮಾಸಿಕವಾಗಿ ಪತ್ತೆಹಚ್ಚಲು 'ಐಎಸ್‌ಪಿ' (ISP - Index of Services Production) ಅಥವಾ ಸೇವಾ ಉತ್ಪಾದನಾ ಸೂಚ್ಯಂಕವನ್ನು ಜುಲೈ 2026 ರಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ➤ ಸೇವಾ ಉತ್ಪಾದನಾ ಸೂಚ್ಯಂಕ (ISP): ಸೇವಾ ಉತ್ಪಾದನಾ ಸೂಚ್ಯಂಕ (Index of Services Production) ಎನ್ನುವುದು ಒಂದು ನಿರ್ದಿಷ್ಟ ಆಧಾರ ವರ್ಷಕ್ಕೆ (Base Year) ಹೋಲಿಸಿದರೆ, ದೇಶದ ಸೇವಾ ವಲಯದ ಒಟ್ಟು ಉತ್ಪಾದನೆಯ ಪ್ರಮಾಣದಲ್ಲಿ ಆಗುವ ಅಲ್ಪಾವಧಿಯ (ಮಾಸಿಕ) ಬದಲಾವಣೆಗಳನ್ನು ಅಳೆಯುವ ಒಂದು ಮ್ಯಾಕ್ರೋ ಆರ್ಥಿಕ ಸೂಚಕವಾಗಿದೆ (Macroeconomic Indicator). ಸರಳವಾಗಿ ಹೇಳುವುದಾದರೆ, ಫ್ಯಾಕ್ಟರಿಗಳು ಮತ್ತು ಕೈಗಾರಿಕೆಗಳ ಬೆಳವಣಿಗೆಯನ್ನು 'IIP' ಅಳೆಯುವಂತೆ, ಬ್ಯಾಂಕಿಂಗ್, ಸಾರಿಗೆ, ಹೋಟೆಲ್‌ಗಳು ಮುಂತಾದ ಸೇವೆಗಳ ಬೆಳವಣಿಗೆಯನ್ನು 'ISP' ಅಳೆಯುತ್ತದೆ. ➤ ನೀತಿ ಆಯೋಗದ ಫೆಲೋ ಆಗಿರುವ ದೇವಜಾನಿ ಘೋಷ್ ಅವರ ಅಧ್ಯಕ್ಷತೆಯಲ್ಲಿ ಮೇ 2025 ರಲ್ಲಿ ರಚಿಸಲಾಗಿದ್ದ 24 ಸದಸ್ಯರ ತಾಂತ್ರಿಕ ಸಲಹಾ ಸಮಿತಿಯ (TAC-ISP) ಮಾರ್ಗದರ್ಶನದಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ➤ ಯಾವೆಲ್ಲಾ ಸೇವೆಗಳು ಇದರ ವ್ಯಾಪ್ತಿಗೆ ಬರುತ್ತವೆ? ಸಗಟು ಮತ್ತು ಚಿಲ್ಲರೆ ವ್ಯಾಪಾರ (Wholesale & Retail Trade) ಸಾರಿಗೆ ಮತ್ತು ದಾಸ್ತಾನು (Transport & Warehousing) ಬ್ಯಾಂಕಿಂಗ್ ಮತ್ತು ವಿಮೆ (Banking & Insurance) ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು (Hotels & Restaurants) ರಿಯಲ್ ಎಸ್ಟೇಟ್ (Real Estate) ದೂರಸಂಪರ್ಕ ಮತ್ತು ಐಟಿ ಸೇವೆಗಳು (Telecommunications & IT) ಕಲೆ, ಮನರಂಜನೆ ಮತ್ತು ಕ್ರೀಡೆ (Arts, Entertainment & Recreation) ➤ ಯಾವ ಸೇವೆಗಳು ಹೊರಗುಳಿದಿವೆ? ಸಾರ್ವಜನಿಕ ಆಡಳಿತ, ರಕ್ಷಣೆ, ಸರ್ಕಾರಿ ಸ್ವಾಮ್ಯದ ಆರೋಗ್ಯ ಮತ್ತು ಶಿಕ್ಷಣ ಸೇವೆಗಳು, ಜೂಜು ಮತ್ತು ಬೆಟ್ಟಿಂಗ್ ಸೇರಿದಂತೆ ಒಟ್ಟು 9 ಪ್ರಮುಖ ವರ್ಗಗಳನ್ನು ಸದ್ಯಕ್ಕೆ ಇದರ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇವು ಪ್ರಮುಖವಾಗಿ ಸರ್ಕಾರದ ಪ್ರಮುಖ ಕಾರ್ಯಗಳು ಅಥವಾ ಅನೌಪಚಾರಿಕ ವಲಯಕ್ಕೆ ಸೇರಿರುವುದರಿಂದ ದತ್ತಾಂಶದ ಕೊರತೆಯ ಕಾರಣದಿಂದ ಹೊರಗಿಡಲಾಗಿದೆ. ➤ ದತ್ತಾಂಶದ ಮೂಲಗಳು: ಜಿಎಸ್‌ಟಿ (GST) ದತ್ತಾಂಶ: ವ್ಯಾಪಾರ, ಸಾರಿಗೆ, ಹೋಟೆಲ್‌ ಮುಂತಾದ ವಲಯಗಳ ಮಾಸಿಕ ಪ್ರಗತಿಯನ್ನು ಪತ್ತೆಹಚ್ಚಲು ಜಿಎಸ್‌ಟಿ ನೆಟ್‌ವರ್ಕ್ (GSTN) ದತ್ತಾಂಶವನ್ನು ಬಳಸಲಾಗುತ್ತದೆ. ಆಡಳಿತಾತ್ಮಕ ದತ್ತಾಂಶ: ರೈಲ್ವೆ ಮತ್ತು ವಾಯುಯಾನ ವಲಯಗಳ ನಿಖರವಾದ ಪ್ರಮಾಣ ಆಧಾರಿತ ಸೂಚಕಗಳನ್ನು (Quantity Indicators) ಪಡೆಯಲು ಇಲಾಖೆಯ ನೇರ ದತ್ತಾಂಶ ಬಳಸಲಾಗುತ್ತದೆ. ASISSE ಸಮೀಕ್ಷೆ: ಆರೋಗ್ಯ ಮತ್ತು ಶಿಕ್ಷಣ ವಲಯಗಳ ನಿಖರ ಮಾಹಿತಿ ಪಡೆಯಲು ವಾರ್ಷಿಕ ಸಂಯೋಜಿತ ಸೇವಾ ವಲಯದ ಉದ್ಯಮಗಳ ಸಮೀಕ್ಷೆಯ (Annual Survey of Incorporated Services Sector Enterprises) ನೆರವು ಪಡೆಯಲಾಗುತ್ತದೆ.