* ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಅವರು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಗ್ರೆಗ್ ಬಾರ್ಕ್ಲೇ ಸ್ಥಾನವನ್ನು ವಹಿಸಲಿದ್ದಾರೆ. * ಪ್ರಸ್ತುತ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿಯು ನವೆಂಬರ್ 30ರಂದು ಕೊನೆಗೊಳ್ಳಲಿದೆ. ಸತತ ಎರಡನೇ ಬಾರಿಗೆ ಹುದ್ದೆ ಅಲಂಕರಿಸಿದ್ದ ಅವರು ಇತ್ತೀಚೆಗೆ ಮೂರನೇ ಅವಧಿಗೆ ಸ್ಪರ್ಧೆಯಿಂದ ದೂರ ಸರಿದಿದ್ದರು.  ನಂತರ ಜಯ್‌ ಶಾ ಆ ಸ್ಥಾನಕ್ಕೆ ಏಕೈಕ ನಾಮನಿರ್ದೇಶಿತರಾಗಿದ್ದರು. * ಜಯ್ ಶಾ ಅವರು ಈ ಬಾರಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ ಅವರಿಗೆ ಪ್ರತಿಸ್ಫರ್ಧಿಯಾಗಿ ಯಾರು ಸಹ ನಾಮಪತ್ರ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಇಂದು (ಆಗಸ್ಟ್ 27) ಅಧಿಕೃತವಾಗಿ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದು, 2024ರ ಡಿಸೆಂಬರ್ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ.* 35 ವರ್ಷದ ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರುತ್ತಿದ್ದಂತೆ, ಐಸಿಸಿ ಮುಖ್ಯಸ್ಥರಾದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಹುದ್ದೆಯನ್ನು ಅಲಂಕರಿಸಿದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. * ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ಈವರೆಗೆ ನಾಲ್ವರು ಭಾರತೀಯರು ಕಾಣಿಸಿಕೊಂಡಿದ್ದಾರೆ. ಅವರೆಂದರೆ, ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್. ಇದೀಗ ಈ ಹುದ್ದೆಗೇರಿದ ಐದನೇ ಭಾರತೀಯನಾಗಿ ಜಯ್ ಶಾ ಹೊರಹೊಮ್ಮಿದ್ದಾರೆ.