➤ ಏಪ್ರಿಲ್ 17, 2026 ರಂದು ಹರಿವಂಶ್ ನಾರಾಯಣ್ ಸಿಂಗ್ ಅವರು ರಾಜ್ಯಸಭೆಯ ಉಪಸಭಾಪತಿಯಾಗಿ ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸಂಸದೀಯ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳಿಂದ ನಾಮನಿರ್ದೇಶನಗೊಂಡ ಸದಸ್ಯರೊಬ್ಬರು ಈ ಸಾಂವಿಧಾನಿಕ ಹುದ್ದೆಗೆ ಆಯ್ಕೆಯಾಗಿರುವುದು ವಿಶೇಷವಾಗಿದೆ. ಸದನದ ನಾಯಕ ಜೆ.ಪಿ. ನಡ್ಡಾ ಅವರು ಮಂಡಿಸಿದ ಈ ಪ್ರಸ್ತಾವನೆಯನ್ನು ವಿರೋಧ ಪಕ್ಷಗಳು ಸೇರಿದಂತೆ ಎಲ್ಲಾ ಪಕ್ಷಗಳು ಒಮ್ಮತದಿಂದ ಬೆಂಬಲಿಸಿದ್ದು, ಇದು ಭಾರತೀಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದೆ.➤ ಭಾರತೀಯ ಸಂಸದೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳಿಂದ ನಾಮನಿರ್ದೇಶನಗೊಂಡ (Nominated Member) ಸದಸ್ಯರೊಬ್ಬರು ಉಪಸಭಾಪತಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಹರಿವಂಶ್ ಅವರ ಹಿಂದಿನ ಅವಧಿಯು ಏಪ್ರಿಲ್ 9, 2026 ರಂದು ಮುಕ್ತಾಯಗೊಂಡಿತ್ತು. ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹರಿವಂಶ್ ಅವರನ್ನು ನಾಮನಿರ್ದೇಶನ ಮಾಡಿದ್ದರು.➤ ಭಾರತೀಯ ಸಂವಿಧಾನದ ವಿಧಿ 89(2) ರ ಅನ್ವಯ ರಾಜ್ಯಸಭೆಯು ತನ್ನ ಸದಸ್ಯರಲ್ಲೊಬ್ಬರನ್ನು ಉಪಸಭಾಪತಿಯನ್ನಾಗಿ ಆಯ್ಕೆ ಮಾಡುತ್ತದೆ. ಸಭಾಪತಿಗಳ (ಉಪರಾಷ್ಟ್ರಪತಿ) ಅನುಪಸ್ಥಿತಿಯಲ್ಲಿ ಸದನದ ಜವಾಬ್ದಾರಿ ನಿರ್ವಹಿಸುವ ಇವರು, ರಾಜ್ಯಸಭೆಯ ಸದಸ್ಯತ್ವ ಇರುವವರೆಗೆ ಅಥವಾ ರಾಜೀನಾಮೆ ನೀಡುವವರೆಗೆ ಈ ಹುದ್ದೆಯಲ್ಲಿ ಮುಂದುವರಿಯಬಹುದು. ಇವರ ವೇತನ ಮತ್ತು ಭತ್ಯೆಗಳನ್ನು ಸಂಸತ್ತು ನಿರ್ಧರಿಸುತ್ತದೆಯಲ್ಲದೆ, ಇದು ಭಾರದ ಸಂಚಿತ ನಿಧಿಯಿಂದ (Consolidated Fund of India) ಪಾವತಿಸಲ್ಪಡುತ್ತದೆ.➤ ಪ್ರಧಾನಿ ನರೇಂದ್ರ ಮೋದಿ ಅವರು ಹರಿವಂಶ್ ಅವರನ್ನು ಅಭಿನಂದಿಸುತ್ತಾ, "ಹರಿವಂಶ್ ಅವರ ಅನುಭವವು ಸದನದ ಘನತೆಯನ್ನು ಹೆಚ್ಚಿಸಿದೆ. ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಅವರ ಶೈಲಿಯು ಶ್ಲಾಘನೀಯ," ಎಂದು ತಿಳಿಸಿದರು. ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೂ ಸಹ ಹರಿವಂಶ್ ಅವರ ಆಯ್ಕೆಯನ್ನು ಸ್ವಾಗತಿಸಿದ್ದಾರೆ.