➤ ತಾಂತ್ರಿಕ ಶಿಕ್ಷಣದಲ್ಲಿ ಭಾರತೀಯ ಭಾಷೆಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE)ಯು ತನ್ನ ಮಹತ್ವಾಕಾಂಕ್ಷೆಯ ‘ವಾಣಿ’ (VAANI - Vibrant Advocacy for Advancement and Nuanced Instruction) ಯೋಜನೆಯ ಮೂರನೇ ಆವೃತ್ತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಾತೃಭಾಷೆಯ ಪ್ರಾಮುಖ್ಯತೆಯನ್ನು ಸಾರುವ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಉನ್ನತ ಶಿಕ್ಷಣವನ್ನು ಸುಲಭಗೊಳಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.➤ ವಾಣಿ (VAANI) ಯೋಜನೆ: 'ವಾಣಿ' ಎಂದರೆ Vibrant Advocacy for Advancement and Nuanced Instruction. ಈ ಯೋಜನೆಯು ಭಾರತೀಯ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣವನ್ನು ಉತ್ತೇಜಿಸಲು ಸಂಸ್ಥೆಗಳಿಗೆ ಮತ್ತು ಅಧ್ಯಾಪಕರಿಗೆ ಆರ್ಥಿಕ ನೆರವು ನೀಡುವ ಒಂದು ಕಾರ್ಯಕ್ರಮವಾಗಿದೆ. ಈ ಯೋಜನೆಯ ಮೂಲಕ ಎಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ವಿಷಯಗಳ ಕುರಿತು ಪ್ರಾದೇಶಿಕ ಭಾಷೆಗಳಲ್ಲಿ ಸಮ್ಮೇಳನಗಳು, ಕಾರ್ಯಾಗಾರಗಳು ಮತ್ತು ಸೆಮಿನಾರ್‌ಗಳನ್ನು ಆಯೋಜಿಸಲು ಉತ್ತೇಜನ ನೀಡಲಾಗುತ್ತದೆ.➤ ಒಟ್ಟು 12 ಭಾಷೆಗಳಿಗೆ ಆದ್ಯತೆ: ಸಂವಿಧಾನದ 8ನೇ ಅನುಸೂಚಿಯಲ್ಲಿರುವ ಕನ್ನಡ ಸೇರಿದಂತೆ ಪ್ರಮುಖ 12 ಭಾರತೀಯ ಭಾಷೆಗಳಲ್ಲಿ (ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು) ಜ್ಞಾನ ಪ್ರಸಾರ ಮಾಡುವುದು ಈ ಯೋಜನೆಯ ಗುರಿ.  ಈ ಯೋಜನೆಯಡಿ ಆಯ್ಕೆಯಾದ ಸಂಸ್ಥೆಗಳಿಗೆ 2 ಲಕ್ಷದಿಂದ 5 ಲಕ್ಷ ರೂಪಾಯಿಗಳವರೆಗೆ ಧನಸಹಾಯ ನೀಡಲಾಗುತ್ತದೆ.➤ ಅರ್ಹತೆ: AICTE ಇಂದ ಅನುಮೋದನೆ ಪಡೆದ ಶಿಕ್ಷಣ ಸಂಸ್ಥೆಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಪ್ರತಿ ವರ್ಷ ಸರಿಸುಮಾರು 100 ಸಮ್ಮೇಳನಗಳಿಗೆ ಧನಸಹಾಯ ನೀಡುವ ಗುರಿಯನ್ನು AICTE ಹೊಂದಿದೆ.  ಈ ಯೋಜನೆಯು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಆಶಯದಂತೆ ಮಾತೃಭಾಷೆಯಲ್ಲಿ ಕಲಿಕೆಯನ್ನು ಉತ್ತೇಜಿಸುತ್ತದೆ.