➤ ದುಬೈ: ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಭಾರತದ ಖ್ಯಾತ ಶಿಕ್ಷಕಿ ಮತ್ತು ಸಮಾಜ ಸೇವಕಿ ರೂಬಲ್ ನಾಗಿ (Roubel Nagi) ಅವರಿಗೆ ಪ್ರತಿಷ್ಠಿತ 'ಗ್ಲೋಬಲ್ ಟೀಚರ್' (Global Teacher Prize) ಪ್ರಶಸ್ತಿಯನ್ನು ಗುರುವಾರ (05-02-2026) ದುಬೈನಲ್ಲಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ವಿಶ್ವಮಟ್ಟದಲ್ಲಿ ಶಿಕ್ಷಕರಿಗೆ ನೀಡಲಾಗುವ ಅತ್ಯುನ್ನತ ಗೌರವವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿನ ಅವರ ಅಪಾರ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.- ಈ ಪ್ರಶಸ್ತಿಯು ಒಂದು ಮಿಲಿಯನ್ ಡಾಲರ್ (ಭಾರತೀಯ ರೂಪಾಯಿಗಳಲ್ಲಿ ಸುಮಾರು ₹8.4 ಕೋಟಿಗೂ ಹೆಚ್ಚು) ನಗದು ಬಹುಮಾನವನ್ನು ಒಳಗೊಂಡಿದೆ. ➤ ರೂಬಲ್ ಅವರು ತಮ್ಮ ಪ್ರತಿಷ್ಠಾನದ ಮೂಲಕ ಭಾರತದಾದ್ಯಂತ ಸುಮಾರು 800ಕ್ಕೂ ಹೆಚ್ಚು ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ವಿಶಿಷ್ಟ ಬೋಧನಾ ಶೈಲಿ: ಕೊಳೆಗೇರಿಗಳ ಗೋಡೆಗಳ ಮೇಲೆ ಆಕರ್ಷಕ ಚಿತ್ರಗಳನ್ನು ಬಿಡಿಸುವ ಮೂಲಕ (Mural Art), ಮಕ್ಕಳಿಗೆ ವಿಜ್ಞಾನ, ಗಣಿತ, ಸಾಹಿತ್ಯ ಮತ್ತು ಇತಿಹಾಸದಂತಹ ವಿಷಯಗಳನ್ನು ಅತ್ಯಂತ ಸರಳವಾಗಿ ಬೋಧಿಸುತ್ತಿರುವುದು ಇವರ ವಿಶೇಷತೆ.➤ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೂಬಲ್ ನಾಗಿ ಅವರು, "ಶಾಲೆಗೆ ಹೋಗಲಾಗದ ಮತ್ತು ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ರಚನಾತ್ಮಕ ಕಲಿಕೆಯನ್ನು ಒದಗಿಸುವುದೇ ನನ್ನ ಮುಖ್ಯ ಗುರಿ. ಈ ಪ್ರಶಸ್ತಿಯ ಮೊತ್ತವನ್ನು ಬಡ ಯುವಜನತೆಗಾಗಿ ಉಚಿತ ವೃತ್ತಿ ತರಬೇತಿ ಕೇಂದ್ರಗಳನ್ನು (Vocational Training Centers) ಸ್ಥಾಪಿಸಲು ಬಳಸಲಾಗುವುದು," ಎಂದು ತಿಳಿಸಿದ್ದಾರೆ.➤ ಗ್ಲೋಬಲ್ ಟೀಚರ್ ಪ್ರಶಸ್ತಿ: 2015ರಲ್ಲಿ ವರ್ಕಿ ಫೌಂಡೇಶನ್‌ನಿಂದ ಸ್ಥಾಪಿಸಲ್ಪಟ್ಟ, ಜಗತ್ತಿನಾದ್ಯಂತ ಶಿಕ್ಷಣದ ಗುಣಮಟ್ಟ ಸುಧಾರಿಸಲು ಶ್ರಮಿಸುವ ಶಿಕ್ಷಕರನ್ನು ಗೌರವಿಸುವ ಈ ಪ್ರಶಸ್ತಿಗೆ ರೂಬಲ್ ನಾಗಿ ಅವರು ವಿಶ್ವದ 10ನೇ ಸಾಧಕಿಯಾಗಿ ಆಯ್ಕೆಯಾಗಿದ್ದಾರೆ ಮತ್ತು ಈ ಹಿಂದೆ 2020ರಲ್ಲಿ ಮಹಾರಾಷ್ಟ್ರದ ರಂಜಿತ್ ಸಿನ್ಹಾ ಡಿಸಾಲೆ ಅವರು ಈ ಪ್ರಶಸ್ತಿ ಪಡೆದ ಮೊದಲ ಭಾರತೀಯರಾಗಿದ್ದರು ಎಂಬುದು ಗಮನಾರ್ಹ.