* ಕಾರವಾರದ ಕದಂಬ ನೌಕಾನೆಲೆಯಲ್ಲಿ ಭಾನುವಾರ (29-December- 2025) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನೌಕೆಯಲ್ಲಿ ಐತಿಹಾಸಿಕ ಸಂಚಾರ ನಡೆಸಿದರು. ಸಮುದ್ರದ ಆಳದಲ್ಲಿ ಗಂಟೆಗೂ ಹೆಚ್ಚು ಕಾಲ ನಡೆದ ಈ ಪಯಣದ ಮೂಲಕ ಜಲಾಂತರ್ಗಾಮಿ ನೌಕೆಯಲ್ಲಿ ಪ್ರಯಾಣ ಮಾಡಿದ ಎರಡನೇ ರಾಷ್ಟ್ರಪತಿಯಾಗುವ ಗೌರವವನ್ನು ಅವರು ಪಡೆದರು. ಇದಕ್ಕೂ ಮೊದಲು 2006ರಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಇದೇ ರೀತಿಯ ಸಂಚಾರ ನಡೆಸಿದ್ದರು.* ನೌಕಾದಳದ ವಿಶೇಷ ಹೆಲಿಕಾಪ್ಟರ್ ಮೂಲಕ ನೌಕಾನೆಲೆಗೆ ಆಗಮಿಸಿದ ರಾಷ್ಟ್ರಪತಿ ಮುರ್ಮು ಅವರನ್ನು ರಾಜ್ಯಪಾಲ ಥಾವರಚಂದ್ ಗೆಹೋಟ್ ಸ್ವಾಗತಿಸಿದರು. ಬಳಿಕ ನೌಕಾ ಸಮವಸ್ತ್ರ ಧರಿಸಿ ಜಲಾಂತರ್ಗಾಮಿ ನೌಕೆಗೆ ತೆರಳಿದ ಅವರು ನೌಕಾಪಡೆಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ಈ ಸಂಚಾರದ ವೇಳೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರು ರಾಷ್ಟ್ರಪತಿಗೆ ಸಾಥ್ ನೀಡಿದರು.* ಈ ಘಟನೆ ಭಾರತೀಯ ನೌಕಾಪಡೆಯ ಸಾಮರ್ಥ್ಯ, ತಾಂತ್ರಿಕ ಪ್ರಗತಿ ಮತ್ತು ರಾಷ್ಟ್ರದ ಸಮುದ್ರ ಭದ್ರತೆಗೆ ನೀಡಿರುವ ಬಲಿಷ್ಠ ಸಂದೇಶವಾಗಿದ್ದು, ‘ಆತ್ಮನಿರ್ಭರ ಭಾರತ’ ಯೋಜನೆಯಡಿ ನಿರ್ಮಿತ ಪಿ–75 ಸ್ಕಾರ್ಪಿನ್ ಯೋಜನೆಯ ಮಹತ್ವವನ್ನೂ ಪ್ರತಿಬಿಂಬಿಸುತ್ತದೆ. 2025ರ ಜನವರಿಯಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡ ಐಎನ್‌ಎಸ್ ವಾಗೀರ್ ಈ ಯೋಜನೆಯ ಅಂತಿಮ ಜಲಾಂತರ್ಗಾಮಿ ನೌಕೆಯಾಗಿದೆ.