Job Description: ➤ ಹಿಂದೂ ಮಹಾಸಾಗರ ವಲಯದಲ್ಲಿ ಚೀನಾದ ಹೆಚ್ಚುತ್ತಿರುವ ಉಪಟಳ ಹಾಗೂ ಜಾಗತಿಕ ಕಡಲ ಭದ್ರತೆಯ ಸವಾಲುಗಳಿಗೆ ಕಡಿವಾಣ ಹಾಕಲು ಭಾರತೀಯ ನೌಕಾಪಡೆ (Indian Navy) ಭರ್ಜರಿಯಾಗಿ ಸಜ್ಜಾಗುತ್ತಿದೆ. ಇದರ ಭಾಗವಾಗಿ, ಕೋಲ್ಕತಾದ ಪ್ರಮುಖ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮವಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ (GRSE) ಸಂಸ್ಥೆಯು ನಿರ್ಮಿಸಿರುವ ಮೂರು ಅತ್ಯಾಧುನಿಕ ಸ್ವದೇಶಿ ನೌಕೆಗಳು ಶೀಘ್ರದಲ್ಲೇ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿವೆ.➤ ಇತ್ತೀಚೆಗಷ್ಟೇ ನೌಕಾಪಡೆಗೆ ಹಸ್ತಾಂತರಗೊಂಡಿರುವ 'ದುನಗಿರಿ' (Dunagiri), 'ಅಗ್ರಯ್' (Agray) ಮತ್ತು 'ಸಂಶೋಧಕ್' (Sanshodhak) ಎಂಬ ಈ ಮೂರು ಹಡಗುಗಳು ಭಾರತದ ಕಡಲ ಗಡಿ ರಕ್ಷಣೆಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿವೆ.➤ ಭಾರತೀಯ ನೌಕಾಪಡೆಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ವಿದ್ಯಮಾನ ಎಂಬಂತೆ, ಒಂದೇ ದಿನದಲ್ಲಿ ಮೂರು ಪ್ರಮುಖ ರಕ್ಷಣಾ ವೇದಿಕೆಗಳನ್ನು GRSE ಸಂಸ್ಥೆಯು ನೌಕಾಪಡೆಗೆ ಯಶಸ್ವಿಯಾಗಿ ಹಸ್ತಾಂತರಿಸಿದೆ. ಇದು ಕೇಂದ್ರ ಸರ್ಕಾರದ 'ಆತ್ಮನಿರ್ಭರ ಭಾರತ' (Aatmanirbhar Bharat) ಮತ್ತು 'ಮೇಕ್ ಇನ್ ಇಂಡಿಯಾ' ಪರಿಕಲ್ಪನೆಗೆ ಸಿಕ್ಕ ಬಹುದೊಡ್ಡ ಯಶಸ್ಸಾಗಿದೆ. ಈ ನೌಕೆಗಳ ಸೇರ್ಪಡೆಯೊಂದಿಗೆ GRSE ಸಂಸ್ಥೆಯು ನಿರ್ಮಿಸಿದ ಒಟ್ಟು ಯುದ್ಧನೌಕೆಗಳ ಸಂಖ್ಯೆ 118ಕ್ಕೆ ಏರಿಕೆಯಾಗಿದೆ.➤ INS ದುನಗಿರಿ (INS Dunagiri): ಪ್ರತಿಷ್ಠಿತ ಪ್ರಾಜೆಕ್ಟ್ 17A ಅಡಿಯಲ್ಲಿ ನಿರ್ಮಾಣಗೊಂಡು ಶತ್ರುಗಳ ರೇಡಾರ್ ಕಣ್ಣಿಗೆ ಮಣ್ಣೆರಚುವ ಅತ್ಯಾಧುನಿಕ ಸ್ಟೆಲ್ತ್ ತಂತ್ರಜ್ಞಾನ ಹೊಂದಿರುವ 149 ಮೀಟರ್ ಉದ್ದ ಹಾಗೂ 6,670 ಟನ್ ತೂಕದ 5ನೇ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ನೌಕೆಯಾದ 'INS ದುನಗಿರಿ', ಭಾರತದ ಹೆಮ್ಮೆಯ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು, ಬರಾಕ್-8 ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆ ಹಾಗೂ ಮುಂಗಡ ರೇಡಾರ್‌ಗಳನ್ನು ಒಳಗೊಂಡಿದ್ದು, ವಾಯು, ಸಮುದ್ರದ ಮೇಲ್ಮೈ ಮತ್ತು ಸಮುದ್ರದಾಳದ ತ್ರಿವಳಿ ರಂಗದಲ್ಲೂ ಏಕಕಾಲದಲ್ಲಿ ದಾಳಿ ನಡೆಸುವ ಅಪಾರ ಸಾಮರ್ಥ್ಯದೊಂದಿಗೆ ಶತ್ರುಗಳ ಪಾಲಿಗೆ ನಿಜಕ್ಕೂ ಸಿಂಹಸ್ವಪ್ನವಾಗಿದೆ.➤ INS ಅಗ್ರಯ್ (INS Agray): ಕರಾವಳಿ ರಕ್ಷಣೆಗಾಗಿ ರೂಪಿಸಲಾದ 8 ಆರ್ನಾಲ್ ಕ್ಲಾಸ್ (Arnala-class) ಜಲಂತರ್ಗಾಮಿ ನಿರೋಧಕ ಆಳವಿಲ್ಲದ ನೀರಿನ ನೌಕೆಗಳಲ್ಲಿ (ASW-SWC) ಇದು ನಾಲ್ಕನೆಯದಾಗಿದೆ. ಸುಮಾರು 77 ಮೀಟರ್ ಉದ್ದವಿರುವ ಈ ನೌಕೆಯು 'ವಾಟರ್ ಜೆಟ್ ಪ್ರೊಪಲ್ಷನ್' (Waterjet Propulsion) ತಂತ್ರಜ್ಞಾನದ ಮೂಲಕ ಚಲಿಸುತ್ತದೆ. ಇದು ಶತ್ರು ದೇಶಗಳ ಸಬ್‌ಮರಿನ್‌ಗಳನ್ನು (ಜಲಂತರ್ಗಾಮಿ) ಪತ್ತೆಹಚ್ಚಲು ಸುಧಾರಿತ ಸೋನಾರ್ (SONAR) ವ್ಯವಸ್ಥೆ, ಲಘು ಟಾರ್ಪಿಡೊಗಳು ಮತ್ತು ಸ್ವದೇಶಿ ರಾಕೆಟ್ ಲಾಂಚರ್‌ಗಳನ್ನು ಹೊಂದಿದೆ. ಇದರಲ್ಲಿ ಶೇ. 88 ಕ್ಕೂ ಹೆಚ್ಚು ಸ್ವದೇಶಿ ಉಪಕರಣಗಳನ್ನು ಬಳಸಲಾಗಿದೆ.➤ INS ಸಂಶೋಧಕ್ : ಇದು ನೌಕಾಪಡೆಗಾಗಿ ನಿರ್ಮಿಸಲಾದ ನಾಲ್ಕು ಬೃಹತ್ ಸಮೀಕ್ಷಾ ನೌಕೆಗಳ (Survey Vessels Large - SVL) ಸರಣಿಯಲ್ಲಿ ಕೊನೆಯದಾಗಿದೆ. 110 ಮೀಟರ್ ಉದ್ದದ ಈ ನೌಕೆಯು ಸಮುದ್ರದ ಆಳದ ಹೈಡ್ರೋಗ್ರಾಫಿಕ್ ಮತ್ತು ಜಿಯೋಫಿಸಿಕಲ್ ದತ್ತಾಂಶಗಳನ್ನು ಕಲೆಹಾಕಲು ನೆರವಾಗುತ್ತದೆ. ಇದು ಕೇವಲ ನಕ್ಷೆ ತಯಾರಿಕೆಗೆ ಮಾತ್ರವಲ್ಲದೆ, ಕಡಲ ತೀರದ ರಕ್ಷಣೆ, ಸಣ್ಣ ಪ್ರಮಾಣದ ಯುದ್ಧಗಳು, ಹೆಲಿಕಾಪ್ಟರ್ ಕಾರ್ಯಾಚರಣೆ ಹಾಗೂ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಕಾರ್ಯಾಚರಣೆಗಳಿಗೂ ಬಳಕೆಯಾಗಲಿದೆ.➤ ಹಿಂದೂ ಮಹಾಸಾಗರ ವಲಯದಲ್ಲಿ (IOR) ಚೀನಾದ ನೌಕಾಪಡೆಯು ತನ್ನ ಪ್ರಭಾವವನ್ನು ವಿಸ್ತರಿಸಲು ನಿರಂತರ ಪ್ರಯತ್ನ ನಡೆಸುತ್ತಿದೆ. ಈ ಮೂರು ನೌಕೆಗಳ ಸೇರ್ಪಡೆಯಿಂದಾಗಿ ಸಮುದ್ರದಲ್ಲಿ ಭಾರತದ ಕಣ್ಣಾವಲು (Surveillance) ಮತ್ತು ಕಾರ್ಯಾಚರಣೆಯ ಸಾಮರ್ಥ್ಯ ಗಣನೀಯವಾಗಿ ಹೆಚ್ಚಲಿದೆ. ಆರ್ಥಿಕ ಮತ್ತು ವ್ಯೂಹಾತ್ಮಕ ದೃಷ್ಟಿಯಿಂದ ಮಹತ್ವದ ಈ ಪ್ರದೇಶದಲ್ಲಿ ಭಾರತದ ಹಿಡಿತವನ್ನು ಈ ನೌಕೆಗಳು ಮತ್ತಷ್ಟು ಗಟ್ಟಿಗೊಳಿಸಲಿವೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನೌಕಾಪಡೆಯು 2047ರ ವೇಳೆಗೆ ಸಂಪೂರ್ಣ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿದೆ.