* ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ರಾಷ್ಟ್ರದಲ್ಲೇ ಮೊದಲ ಬಾರಿಗೆ ಗುರುವಾರ ಆಸ್ಪತ್ರೆಯಲ್ಲಿ ‘ಜೀವಂತ ಶವದ ಸ್ಥಿತಿಯಲ್ಲಿ’ ನರಳುತ್ತಿರುವ ರೋಗಿಯೊಬ್ಬರಿಗೆ ವೈದ್ಯರ ಮನವಿ ಮೇರೆಗೆ ಚಿಕಿತ್ಸೆ ನಿಲ್ಲಿಸಲು ಅವಕಾಶ ಕಲ್ಪಿಸಿದೆ. ಈ ರೀತಿ ಎಂಡ್‌ ಆಫ್‌ ಲೈಫ್‌ ಕೇರ್‌ ವಿಲ್‌ (ಇಚ್ಛೆಯ ಮೇರೆಗೆ ಜೀವನ ಅಂತ್ಯಗೊಳಿಸುವ ಉಯಿಲು) ಜಾರಿ ಮಾಡಲು ಅನುಮತಿ ನೀಡಿದ ಮೊದಲ ಹೈಕೋರ್ಟ್‌ ನ್ಯಾಯಾಧೀಶ ಎಂಬ ಕೀರ್ತಿಗೆ ಗೋವಾ ಪೀಠದ ನ್ಯಾ ಎಂ.ಎಸ್‌ ಸೋನಕ್‌ ಭಾಜನರಾಗಿದ್ದಾರೆ.* ‘ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನಿಲ್ಲಿಸಲು ಅವಕಾಶ ಕೊಡಬಹುದು’ 2023ರ ಮಾರ್ಚ್‌ನಲ್ಲಿ ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ಚಾರಿತ್ರಿಕ ತೀರ್ಪನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯ ಎಂಬ ಕೀರ್ತಿಗೆ ಗೋವಾ ಭಾಜನವಾಗಿದೆ.* ಮೇ 31 ರಂದು ನ್ಯಾ ಎಂ.ಎಸ್‌ ಸೋನಕ್‌ ಅವರು ಜೀವಚ್ಛವದ ಸ್ಥಿತಿಯಲ್ಲಿದ್ದ ರೋಗಿಗೆ ಕೃತಕ ಚಿಕಿತ್ಸೆ ಕಲ್ಪಿಸುವುದನ್ನು ನಿಲ್ಲಿಸಲು ಅನುಮತಿ ನೀಡುವ ಪತ್ರಕ್ಕೆ ಸಹಿ ಹಾಕಿದರು.* ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ. ಸಂದೇಶ್‌ ಛೋಡಂಕರ್ ಮತ್ತು ದಿನೇಶ್‌ ಶೆಟ್ಟಿ ಸಾಕ್ಷಿಗಳಾಗಿ ಸಹಿ ಹಾಕಿದರೆ, ಸರ್ಕಾರದ ಪರವಾಗಿ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿರುವ ಡಾ. ಮೇಧಾ ಸಾಲ್ಕರ್‌ ಸಾಕ್ಷಿಯಾಗಿದ್ದರು.