Job Description: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಇತ್ತೀಚಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಉಭಯ ನಾಯಕರುಗಳ ಈ ಮಾತುಕತೆಯ ವೇಳೆ ಮುಂದಿನ ಹತ್ತು ವರ್ಷಗಳಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸುವ ಕುರಿತು ಮಾತುಕತೆ ನಡೆಸಿದರು. ಹವಾಮಾನ ವೈಪರೀತ್ಯ ಮತ್ತು ಆರೋಗ್ಯ ವಲಯ ಸೇರಿದಂತೆ ಬ್ರಿಟನ್ ಮತ್ತು ಭಾರತ ನಡುವಿನ ಸಂಬಂಧವನ್ನು ತೀವ್ರಗೊಳಿಸುವ ಮತ್ತು ಬಲಪಡಿಸಲು 2021ರ ವರ್ಷವನ್ನು ತಳಹದಿಯನ್ನಾಗಿ ಬಳಸಿಕೊಳ್ಳುವುದು ಈ ಮಾತುಕತೆಯ ಮುಖ್ಯ ಅಂಶವಾಗಿತ್ತು. ಬ್ರಿಟನ್ ದೇಶವು ಯುರೋಪಿಯನ್ ಒಕ್ಕೂಟದಿಂದ 2021ರ ಜನವರಿ 1ರಿಂದ ಸಂಪೂರ್ಣವಾಗಿ ಸ್ವಾತಂತ್ರ್ಯ ಪಡೆದು ಹೊರಬರಲಿದ್ದು, ಮುಖ್ಯವಾಗಿ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಹೊಂದಲು ಬಯಸುತ್ತಿದೆ.