Job Description: ನವದೆಹಲಿ : ಭಾರತವು ಈಗಾಗಲೇ ರಾಷ್ಟ್ರೀಯ ಪ್ರಾಣಿಯಾಗಿ ಹುಲಿ, ರಾಷ್ಟ್ರೀಯ ಪಕ್ಷಿಯಾಗಿ ನವಿಲು, ರಾಷ್ಟ್ರೀಯ ಪುಷ್ಪವಾಗಿ ಕಮಲವನ್ನು ಸೇರಿದಂತೆ ಹಲವು ರಾಷ್ಟ್ರೀಯ ಗುರುತುಗಳನ್ನು ಹೊಂದಿದೆ. ಇನ್ನು ಈ ಸಾಲಿಗೆ ಶೀಘ್ರದಲ್ಲೇ ರಾಷ್ಟ್ರೀಯ ಚಿಟ್ಟೆ ಸೇರ್ಪಡೆಗೊಳ್ಳಲಿದ್ದು, ಚಿಟ್ಟೆಗಳಲ್ಲಿ ಅತ್ಯುತ್ತಮ ಪ್ರಭೇದವೊಂದನ್ನು ಆರಿಸಿ, ಅದಕ್ಕೆ ರಾಷ್ಟ್ರೀಯ ಸ್ಥಾನಮಾನ ನೀಡುವ ವಿಶೇಷ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರವು ಇದಕ್ಕಾಗಿ ಚಿಟ್ಟೆಗಳ ಹವ್ಯಾಸಿ ಅಧ್ಯಯನಕಾರರು, ಸಂಶೋಧಕರು, ಬರಹಗಾರರು ಮತ್ತು ತಜ್ಞರಿರುವ 50 ಸದಸ್ಯರ ಸಮಿತಿಯೊಂದನ್ನು ರಚಿಸಿದ್ದು, ಈ ಸಮಿತಿಯು ಶಿಫಾರಸು ಮಾಡುವ ಚಿಟ್ಟೆಯ ಪ್ರಭೇದಕ್ಕೆ “ರಾಷ್ಟ್ರೀಯ ಚಿಟ್ಟೆ’ ಎಂಬ ಹೆಗ್ಗಳಿಕೆ ಸಿಗಲಿದೆ. ಈಗಾಗಲೇ ಅಂತಿಮ ಪಟ್ಟಿಯಲ್ಲಿ ಸ್ಥಾನದಲ್ಲಿ ಏಳು ಚಿಟ್ಟೆಗಳು ಸ್ಥಾನಪಡೆದಿದ್ದು, ಯಾವ ರಾಷ್ಟ್ರೀಯ ಚಿಟ್ಟೆಯ ಸ್ಥಾನಮಾನ ಪಡೆಯಬೇಕು ಎಂಬ ಪ್ರಶ್ನೆಯನ್ನು ಆನ್ಲೈನ್ ಮೂಲಕ ಸಾರ್ವಜನಿಕರಿಂದ ಆಯ್ಕೆ ಮಾಡಲಾಗುತ್ತಿದೆ. ಈ ವರ್ಷಾಂತ್ಯಕ್ಕೆ ಅಥವಾ 2021ರ ಆರಂಭದಲ್ಲಿ ಅಧಿಕೃತವಾಗಿ ಪ್ರಕಟಗೊಳ್ಳುವ ಸಾಧ್ಯತೆಯಿದೆ.