Job Description: ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) 2020ಕ್ಕೆ 25 ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಗಗನಯಾನ ಹಾಗೂ ಚಂದ್ರಯಾನ-3 ಕೂಡ ಸೇರಿವೆ. ನಾಲ್ವರು ಗಗನಯಾನಿಗಳ ಆಯ್ಕೆ : ಭಾರತದ ಮೊದಲ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನ ಯೋಜನೆಗೆ ನಾಲ್ವರು ಗಗನಯಾನಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ. ಜನವರಿ ಮೂರನೇ ವಾರದಿಂದ ಅವರಿಗೆ ರಷ್ಯಾದಲ್ಲಿ ತರಬೇತಿ ಆರಂಭಿಸಲಾಗುತ್ತದೆ. ಈ ವರ್ಷವೇ ಚಂದ್ರಯಾನ-3 ಅನುಮಾನ : ಚಂದ್ರನಲ್ಲಿಗೆ ನೌಕೆ ಕಳುಹಿಸುವ ಚಂದ್ರಯಾನ-3ಗೆ ಸರ್ಕಾರದಿಂದ ಅನುಮೋದನೆ ದೊರಕಿದೆ. ಅದಕ್ಕೆ ಸಿದ್ಧತೆ ಕೂಡ ನಡೆದಿದೆ. ಗಗನಯಾನ ಮತ್ತು ಚಂದ್ರಯಾನದ ಕಾರ್ಯಗಳು ಏಕಕಾಲಕ್ಕೆ ನಡೆಯಲಿದೆ. ಆದರೆ ನೌಕೆಯ ಉಡಾವಣೆ 2021ಕ್ಕೆ ಮುಂದೂಡುವ ಸಾಧ್ಯತೆ ಇದೆ. ವಿಕ್ರಂ ಲ್ಯಾಂಡರ್ ಚಿತ್ರ ಬಹಿರಂಗಪಡಿಸುವುದಿಲ್ಲ : ಚಂದ್ರಯಾನ-2 ಯೋಜನೆಯು ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುಗಮವಾಗಿ ಇಳಿಯುವಲ್ಲಿ ವಿಫಲವಾಗಿತ್ತು. ಪತನಗೊಂಡ ಲ್ಯಾಂಡರ್ನ ಚಿತ್ರವನ್ನು ಬಿಡುಗಡೆ ಮಾಡದೆ ಇರುವುದು ಇಸ್ರೋದ ನೀತಿಗಳಲ್ಲಿ ಒಂದು ಎಂದ ಶಿವನ್, ಅದು ಪತನಗೊಂಡ ಸ್ಥಳ ಮತ್ತು ಅದು ಎಲ್ಲಿದೆ ಎಂಬುದು ನಮಗೆ ತಿಳಿದಿದೆ ಎಂದು ಹೇಳಿದರು. ತೂತುಕುಡಿಯಲ್ಲಿ ಉಡಾವಣಾ ಕೇಂದ್ರ : ಇಸ್ರೋ ತನ್ನ ಮೂಲಸೌಕರ್ಯ ವ್ಯವಸ್ಥೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಅದಕ್ಕಾಗಿ ತಮಿಳುನಾಡಿನ ತೂತುಕುಡಿ ಸಮೀಪ ಹೊಸ ಉಡ್ಡಯನ ಕೇಂದ್ರ ಸ್ಥಾಪನೆಗೆ ತಯಾರಿ ನಡೆಸಿದೆ. ಈ ವರ್ಷ 25 ಯೋಜನೆಗಳು : ಈ ವರ್ಷ ಒಟ್ಟು 25 ಯೋಜನೆಗಳಿಗೆ ಇಸ್ರೋ ಉದ್ದೇಶಿಸಿದೆ. ಇವುಗಳಲ್ಲಿ ಕೆಲವು 2019ರಲ್ಲಿಯೇ ನಡೆಯಬೇಕಿತ್ತು. ಆದರೆ ಅವುಗಳ ಕಾರ್ಯ ಪೂರ್ಣಗೊಳ್ಳಲಿಲ್ಲ. ಈ ವರ್ಷದ ಮಾರ್ಚ್ ಅಂತ್ಯದೊಳಗೆ ಯೋಜನೆಗಳ ಕಾರ್ಯ ಮುಗಿಯಲಿದೆ ಎಂದು ಶಿವನ್ ತಿಳಿಸಿದರು. 2020-21ನೇ ಸಾಲಿಗೆ ಬಾಹ್ಯಾಕಾಶ ಯೋಜನೆಗಳಿಗಾಗಿ ಇಸ್ರೋ ಕೇಂದ್ರ ಸರ್ಕಾರದಿಂದ 14,000 ಕೋಟಿ ರೂ. ಬಜೆಟ್ ಅನುದಾನಕ್ಕೆ ಬೇಡಿಕೆ ಇರಿಸಿದೆ.