* ಕೌಂಟರ್ ಪಾಯಿಂಟ್ ರಿಸರ್ಚ್ ಶುಕ್ರವಾರ (ಅ.18) ಬಿಡುಗಡೆ ಗೊಳಿಸಿದ ವರದಿಯ ಪ್ರಕಾರ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.* ಗ್ರಾಮೀಣ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳಿಗೆ ಹೆಚ್ಚಿದ ಬೇಡಿಕೆ, ಅನುಕೂಲಕರ ಮುಂಗಾರು ಪರಿಸ್ಥಿತಿಗಳು ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಸರಕಾರ ಕೈಗೊಂಡ ಕ್ರಮಗಳ ಬೆಂಬಲದಿಂದ ದೇಶವು ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿದೆ ಎಂದು ಕೌಂಟರ್ ಪಾಯಿಂಟ್ ರಿಸರ್ಚ್ ವರದಿ ಹೇಳಿದೆ.* ಕೌಂಟರ್ ಪಾಯಿಂಟ್ ರಿಸರ್ಚ್ ವರದಿಯ ಪ್ರಕಾರ ಭಾರತ, ಯುರೋಪ್, ಉತ್ತರ ಅಮೆರಿಕ, ಲ್ಯಾಟಿನ್ ಅಮೆರಿಕ ಮತ್ತು ಮಧ್ಯಪ್ರಾಚ್ಯ ಮತ್ತು ಆಫ್ರಿಕಾಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಏರಿಕೆಯಾಗಿದ್ದರೆ, ಚೀನಾ ಮತ್ತು ಆಗ್ನೇಯ ಏಷ್ಯಾ (ಎಸ್ಇಎ)ಗಳಲ್ಲಿ ಕುಸಿತವಾಗಿದೆ.* ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆ ಈ ವರ್ಷದ ಮೊದಲಾರ್ಧದಲ್ಲಿ ಶೇಕಡಾ 22 ರಷ್ಟು ಗಮನಾರ್ಹ ಬೆಳವಣಿಗೆ ಕಂಡಿದೆ. ಈ ಉತ್ತಮ ಸಾಧನೆಯಿಂದಾಗಿ ಭಾರತವು ಚೀನಾವನ್ನು ಮೀರಿಸಿ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಲು ಭಾರತಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಹಿರಿಯ ವಿಶ್ಲೇಷಕ ಸೌಮೆನ್ ಮಂಡಲ್ ಅವರು ಹೇಳಿದ್ದಾರೆ. * ಚೀನಾದಲ್ಲಿ 125 ಸಿಸಿಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳು ಹೆಚ್ಚು ಜನಪ್ರಿಯವಾಗಿವೆ. ಆದರೆ, ಗ್ರಾಹಕರು ದೈನಂದಿನ ಪ್ರಯಾಣಕ್ಕಾಗಿ ಮೋಟಾರ್ ಸೈಕಲ್ಗಳು ಮತ್ತು ಸ್ಕೂಟರ್ಗಳಿಗಿಂತ ಇ-ಬೈಸಿಕಲ್ಗಳನ್ನು ಹೆಚ್ಚಾಗಿ ಕೊಳ್ಳುತ್ತಿರುವುದರಿಂದ ಚೀನಾದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ, ವಿಶೇಷವಾಗಿ ಎಲೆಕ್ಟ್ರಿಕ್ ವಿಭಾಗದಲ್ಲಿ ತಾತ್ಕಾಲಿಕ ಮಂದಗತಿ ಕಂಡು ಬಂದಿದೆ.* ಆಗ್ನೇಯ ಏಷ್ಯಾದಲ್ಲಿ ಇಂಡೋನೇಷ್ಯಾ, ವಿಯೆಟ್ನಾಂ, ಫಿಲಿಪೈನ್ಸ್, ಥೈಲ್ಯಾಂಡ್ ಮತ್ತು ಮಲೇಷ್ಯಾದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ದ್ವಿಚಕ್ರ ವಾಹನ ಮಾರಾಟ ಕುಸಿತವಾಗಿದೆ. * ಜಾಗತಿಕ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೋಂಡಾ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಹೀರೋ ಮೋಟೊಕಾರ್ಪ್, ಯಮಹಾ, ಟಿವಿಎಸ್ ಮೋಟಾರ್ ಮತ್ತು ಯಡಿಯಾ ನಂತರದ ಸ್ಥಾನಗಳಲ್ಲಿವೆ.