* ದಶಕಗಳಿಂದಲೂ ನೇಪಾಳದಲ್ಲಿ ಭಾರತೀಯ ಕರೆನ್ಸಿ ಬಳಕೆಯ ಮೇಲೆ ಇದ್ದ ನಿರ್ಬಂಧಗಳನ್ನು ನೇಪಾಳ ಸರ್ಕಾರ ಅಧಿಕೃತವಾಗಿ ತೆರವುಗೊಳಿಸಿದೆ. ಈ ಕುರಿತು ಹೊರಡಿಸಿದ ಪ್ರಕಟಣೆಯಂತೆ, ಈಗ 200 ಹಾಗೂ 500 ರೂ. ಮೌಲ್ಯದ ಭಾರತೀಯ ನೋಟುಗಳ ಮೇಲೆ ಇದ್ದ ನಿರ್ಬಂಧಗಳು ರದ್ದುಗೊಂಡಿವೆ.* ಹೊಸ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿ ಗರಿಷ್ಠವಾಗಿ 25,000 ರೂಪಾಯಿ ವರೆಗೆ ಭಾರತೀಯ ಕರೆನ್ಸಿಯನ್ನು ಹೊಂದಲು ಅನುಮತಿ ನೀಡಲಾಗಿದೆ. ಈ ಸಡಿಲಿಕೆ ನೇಪಾಳಿ ಮತ್ತು ಭಾರತೀಯ ನಾಗರಿಕರಿಗೆ ಸಮಾನವಾಗಿ ಅನ್ವಯವಾಗುತ್ತದೆ.* ಭಾರತೀಯ ರಿಸರ್ವ್ ಬ್ಯಾಂಕ್ ವಿದೇಶಿ ವಿನಿಮಯ ನಿರ್ವಹಣೆ (ಕರೆನ್ಸಿ ರಫ್ತು ಮತ್ತು ಆಮದು) ನಿಯಮಗಳು–2015ಕ್ಕೆ ತಿದ್ದುಪಡಿ ತಂದ ನಂತರ, ನೇಪಾಳ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ. ಇದರ ಪರಿಣಾಮವಾಗಿ, ಎರಡೂ ದೇಶಗಳ ನಾಗರಿಕರು ಹೆಚ್ಚಿನ ಮೌಲ್ಯದ ಭಾರತೀಯ ನೋಟುಗಳನ್ನು ಭಾರತದಿಂದ ನೇಪಾಳಕ್ಕೆ ತರಲು ಅಥವಾ ನೇಪಾಳದಿಂದ ಭಾರತಕ್ಕೆ ತೆಗೆದುಕೊಂಡು ಹೋಗಲು ಅವಕಾಶ ದೊರೆತಿದೆ.* ಈ ನಿರ್ಧಾರವು ಭಾರತ–ನೇಪಾಳ ನಡುವಿನ ವ್ಯಾಪಾರ, ಪ್ರವಾಸೋದ್ಯಮ ಮತ್ತು ಜನಸಾಮಾನ್ಯರ ಸಂಚಾರಕ್ಕೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.