* ಬಾಂಗ್ಲಾದೇಶದ 25ನೇ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಸೈಯದ್ ರೆಫಾತ್ ಅಹ್ಮದ್ ಆಗಸ್ಟ್ 11ರಂದು ಪ್ರಮಾಣವಚನ ಸ್ವೀಕರಿಸಿದರು.* ದೇಶದಲ್ಲಿ ತೀವ್ರಗೊಂಡ ಅಶಾಂತಿಯ ನಡುವೆ ನ್ಯಾಯಾಂಗ ವ್ಯವಸ್ಥೆಯಲ್ಲೂ ಬದಲಾವಣೆಗೆ ಪ್ರತಿಭಟನಾಕಾರರು ಒತ್ತಾಯಿಸಿದ ನಂತರ ಒಬೈದುಲ್ಲಾ ಹಸನ್ ರಂದು ಆಗಸ್ಟ್ 10ರಂದು ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಒಂದು ದಿನದ ನಂತರ ಸೈಯದ್ ರೆಫಾತ್ ಅಹ್ಮದ್ ದೇಶದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.* ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಮುಖ್ಯ ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಸಂಪುಟ ಕಾರ್ಯದರ್ಶಿ ಮಹೆಬೂಬ್ ಹೊಸೈನ್ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ನಡೆಸಿಕೊಟ್ಟರು ಎಂದು ವರದಿ ತಿಳಿಸಿದೆ.* ಶೇಕ್ ಹಸೀನಾ ಪದಚ್ಯುತಿ ನಂತರ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರೊ.ಮುಹಮ್ಮದ್ ಯೂನಸ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.* ವಿದ್ಯಾರ್ಥಿಗಳು ಮತ್ತು ಇತರ ಪ್ರತಿಭಟನಾಕಾರರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಢಾಕಾ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊಫೆಸರ್ ಡಾ ಮಕ್ಸುದ್ ಕಮಾಲ್ ಮತ್ತು ಬಾಂಗ್ಲಾ ಅಕಾಡೆಮಿ ಮಹಾನಿರ್ದೇಶಕ ಪ್ರೊಫೆಸರ್ ಡಾ ಎಂಡಿ ಹರುನ್-ಉರ್-ರಶೀದ್ ಅಸ್ಕಾರಿ ಸೇರಿದಂತೆ ಬಾಂಗ್ಲಾದೇಶದ ಹಲವಾರು ಉನ್ನತ ಅಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.