* ಬಾಹ್ಯಾಕಾಶ ವಲಯದಲ್ಲಿ ಜಾಗತಿಕ ಸೂಪರ್ ಪವರ್ ಆಗುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು ಕೆಲ ದಿನಗಳ ಹಿಂದೆ ಭಾರತೀಯ ಬಾಹ್ಯಾಕಾಶ ನೀತಿ 2023 ಘೋಷಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಕಾರ್ಯಚಟುವಟಿಕೆಗಳ ಒಂದಿಷ್ಟು ಜವಾಬ್ದಾರಿಯನ್ನು ಇತರೆ ಸರ್ಕಾರಿ ಸಂಸ್ಥೆಗಳಿಗೆ ಹಂಚಲು ಹಾಗೂ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಒತ್ತು ನೀಡಲಾಗಿದೆ.* ಸ್ಕೈರೂಟ್ ಏರೋಸ್ಪೇಸ್, ಧ್ರುವ ಸ್ಪೇಸ್, ದಿಗಂತರಾ, ಪಿಕ್ಸೆಲ್ ಮತ್ತು ಬೆಲ್ಲಾಟ್ರಿಕ್ಸ್, ಏರೋಸ್ಪೇಸ್ ಮುಂತಾದವು ಈಗಾಗಲೇ ಯಶಸ್ಸನ್ನು ಕಂಡಿವೆ. 2022ರಲ್ಲಿ, ಈ ಕಂಪನಿಗಳು 100 ಮಿಲಿಯನ್ ಡಾಲರ್ಗಿಂತ ಹೆಚ್ಚು ಮೊತ್ತದ ಹೂಡಿಕೆ ಸಂಗ್ರಹಿಸಿವೆ. 2021ರವರೆಗೆ ಒಟ್ಟಾರೆಯಾಗಿ ಸಂಗ್ರಹಗೊಂಡ ಹೂಡಿಕೆ ಮೊತ್ತಕ್ಕಿಂತ ಇದು ಅಧಿಕವಾಗಿದೆ.* 1963ರ ನವೆಂಬರ್ನಲ್ಲಿ ಭಾರತವು ತನ್ನ ಮೊದಲ ರಾಕೆಟನ್ನು ಉಡಾಯಿಸಿತು. ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು ಗಗನಮುಖಿಯಾಗಿ ಬೆಳೆಯುತ್ತಲೇ ಸಾಗಿವೆ. 120ಕ್ಕೂ ಹೆಚ್ಚು ಬಾಹ್ಯಾಕಾಶ ನೌಕಾ ಕಾರ್ಯಾಚರಣೆಗಳು, 90 ಉಪಗ್ರಹ ಉಡಾವಣಾ ಕಾರ್ಯಾಚರಣೆಗಳನ್ನು ಇಸ್ರೋ ಕೈಗೊಂಡಿದೆ. ಅಲ್ಲದೆ, 385 ವಿದೇಶಿ ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ. * ಇಸ್ರೋದ ಎರಡು ಉಪಗ್ರಹ ಉಡಾವಣೆ ವಾಹನಗಳಾದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಮತ್ತು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) ವಿಶ್ವದಲ್ಲಿಯೇ ವಿಶ್ವಾಸಾರ್ಹ ಹಾಗೂ ಕಡಿಮೆ ವೆಚ್ಚದ ಉಡಾವಣಾ ಆಯ್ಕೆಗಳೆಂದು ಪರಿಗಣಿತವಾಗಿವೆ.