* ಕರ್ನಾಟಕ, ತೆಲಂಗಾಣ, ತಮಿಳುನಾಡು ಮತ್ತು ದೆಹಲಿಯಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣವು ಈಶಾನ್ಯ ಹಾಗೂ ಪೂರ್ವ ಭಾಗದ ರಾಜ್ಯಗಳಲ್ಲಿನ ಪ್ರಮಾಣಕ್ಕಿಂತ ಹೆಚ್ಚಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ನಡೆಸಿರುವ ಅಧ್ಯಯನ ತಿಳಿಸಿದೆ.* ಈ ಕಾಯಿಲೆಯ ಪ್ರಮಾಣವು ಭಾರತ ದೇಶದಲ್ಲಿ 2025ರ ವೇಳೆಗೆ 56 ಲಕ್ಷ ಡಿಎಎಲ್‌ವೈಗೆ ಏರಿಕೆ ಆಗಲಿದೆ' ಎಂದು (ಐಸಿಎಂಆರ್) ಅಧ್ಯಯನವು ಅಂದಾಜು ಮಾಡಿದೆ.* ಐಸಿಎಂಆರ್‌ ಅಧ್ಯಯನ ವರದಿಯಲ್ಲಿ 2012ರಿಂದ 2016ರ ನಡುವಿನ ಅವಧಿಯಲ್ಲಿ ರಾಜ್ಯಗಳ ಮಟ್ಟದಲ್ಲಿ ವರದಿಯಾದ ಸ್ತನ ಕ್ಯಾನ್ಸರ್ ಪ್ರಕರಣಗಳನ್ನು ಈ ಅಧ್ಯಯನವು ಪರಿಗಣಿಸಿದೆ. * ಕಾಯಿಲೆಯ ಕಾರಣದಿಂದಾಗಿ ವ್ಯಕ್ತಿಯು ಕಳೆದುಕೊಂಡ ಜೀವಿತಾವಧಿ (ವೈಎಲ್‌ಎಲ್), ವೈಕಲ್ಯಕ್ಕೆ ತುತ್ತಾಗಿ ಕಳೆದ ಜೀವಿತಾವಧಿ (ವೈಎಲ್‌ಡಿ) ಮತ್ತು ಅಂಗವೈಕಲ್ಯ ಹಾಗೂ ಸಾವಿನಿಂದಾಗಿ ಕಳೆದುಕೊಂಡ ಆಯಸ್ಸನ್ನು (ಡಿಎಎಲ್‌ವೈ) ಆಧರಿಸಿ ಈ ಅಧ್ಯಯನವು 3025ರ ವೇಳೆಗೆ ಎದುರಾಗುವ ಕಾಯಿಲೆಯ ಹೊರೆಯನ್ನು ಅಂದಾಜು ಮಾಡಿದೆ.* 2016ರಲ್ಲಿ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಹೊರೆಯು ಪ್ರತಿ ಒಂದು ಲಕ್ಷ ಮಂದಿಗೆ 515.6 ಡಿಎಎಲ್‌ ವೈ ಎಂದು ಅಧ್ಯಯನವು ಅಂದಾಜಿಸಿದೆ. ಮಹಿಳೆಯರನ್ನು ವಿವಿಧ ವಯಸ್ಸುಗಳ ಗುಂಪುಗಳಲ್ಲಿ ವಿಭಜಿಸಿ ಈ ಅಂದಾಜು ಮಾಡಲಾಗಿದೆ.* ಈ ಅಧ್ಯಯನವು 2016 ರಲ್ಲಿ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ (NCRP) ಅಡಿಯಲ್ಲಿ ಭಾರತಾದ್ಯಂತ 28 ಜನಸಂಖ್ಯೆ ಆಧಾರಿತ ಕ್ಯಾನ್ಸರ್ ದಾಖಲಾತಿಗಳ ಡೇಟಾವನ್ನು ಬಳಸಿಕೊಂಡು ಭಾರತದಲ್ಲಿ ಸ್ತ್ರೀ ಸ್ತನ ಕ್ಯಾನ್ಸರ್ ರಾಜ್ಯವಾರು ಅಂಕಿಅಂಶವನ್ನು ಪರಿಶೀಲಿಸಿದೆ.* ಜನಸಂಖ್ಯೆ ಆಧಾರಿತ 28 ಕ್ಯಾನ್ಸರ್ ಮಾಹಿತಿ ಕೇಂದ್ರಗಳಿಂದ ಪಡೆದ ದತ್ತಾಂಶವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ವರದಿಯು ಅಧ್ಯಯನಕ್ಕೆ ಬಳಸಿಕೊಂಡಿದೆ.* 2018 ರಲ್ಲಿ ಗ್ಲೋಬಲ್ ಕ್ಯಾನ್ಸರ್ ಅಬ್ಸರ್ವೇಟರಿ (GLOBOCAN) ಅಧ್ಯಯನದ ಪ್ರಕಾರ, ದಕ್ಷಿಣ ಮಧ್ಯ ಏಷ್ಯಾದ ಮಹಿಳೆಯರಲ್ಲಿ ವಯಸ್ಸಿಗೆ ಅನುಗುಣವಾಗಿ ಸ್ತನ ಕ್ಯಾನ್ಸರ್ ಪ್ರಮಾಣವು 1,00,000 ಮಹಿಳೆಯರಲ್ಲಿ 25.9 ನಷ್ಟಿತ್ತು. * ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಅಧ್ಯಯನದ ಪ್ರಕಾರ 2016 ರಲ್ಲಿ ದಕ್ಷಿಣ ಮಧ್ಯ ಏಷ್ಯಾದಲ್ಲಿ ವಯಸ್ಸಿಗೆ ಅನುಗುಣವಾಗಿ ಸ್ತನ ಕ್ಯಾನ್ಸರ್ ಪ್ರಮಾಣವು 1,00,000 ಮಹಿಳೆಯರಿಗೆ 21.6 ಆಗಿತ್ತು. - ಐಸಿಎಂಆರ್‌ ವರದಿ ಅಧ್ಯಯನದ ಮುಖ್ಯಾಂಶಗಳು : * ಗ್ರಾಮೀಣ ಭಾಗದ ಮಹಿಳೆಯರು ನಗರ ಪ್ರದೇಶಗಳ ಮಹಿಳೆಯರಿಗೆ ಹೋಲಿಸಿದರೆ ಸ್ತನ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಕಡಿಮೆ.* ದೈಹಿಕ ಶ್ರಮ ಇಲ್ಲದ ಜೀವನಶೈಲಿಯು ನಗರಗಳಲ್ಲಿ ವ್ಯಾಪಕವಾಗಿರುವುದು, ಬೊಜ್ಜು ಜಾಸ್ತಿ ಆಗಿರುವುದು, ಮದುವೆಯಾಗುವ ವಯಸ್ಸನ್ನು ಮುಂದೂಡುವುದು ಹಾಗೂ ಎದೆಹಾಲು ಕುಡಿಸುವುದನ್ನು ಕಡಿಮೆ ಮಾಡಿರುವುದು ಕೂಡ ನಗರ ಪ್ರದೇಶಗಳಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚಾಗುವುದಕ್ಕೆ ಕಾರಣ ಎನ್ನಲಾಗಿದೆ.* ಸಾಮಾಜಿಕ-ಆರ್ಥಿಕ ಅಂಶಗಳು ಕೂಡ ಸ್ತನ ಕ್ಯಾನ್ಸರ್ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗುತ್ತವೆ. ಆರೋಗ್ಯಸೇವೆಗಳ ಲಭ್ಯತೆ, ಕ್ಯಾನ್ಸರ್ ತಡೆಯಲು ಕೈಗೊಂಡ ಕ್ರಮಗಳು ಹಾಗೂ ಚಿಕಿತ್ಸೆಯ ಫಲಿತಾಂಶಗಳು ಕ್ಯಾನ್ಸ‌ರ್ ಪ್ರಮಾಣದ ಮೇಲೆ ಪರಿಣಾಮ ಬೀರುತ್ತವೆ.* ಕಡಿಮೆ ಆದಾಯ ಇರುವ ವರ್ಗಗಳಿಗೆ ಸೇರಿದವರಿಗೆ ಗುಣಮಟ್ಟದ ಆರೋಗ್ಯಸೇವೆಗಳನ್ನು ಸಕಾಲದಲ್ಲಿ ಪಡೆಯುವುದು ಕಷ್ಟವಾಗುತ್ತದೆ. ಇದರಿಂದಾಗಿ ಕ್ಯಾನ್ಸರ್ ಪತ್ತೆಹಚ್ಚುವುದು ವಿಳಂಬವಾಗುತ್ತದೆ.