➤ ಜಾಗತಿಕ ರಾಜಕೀಯ ಮತ್ತು ಆರ್ಥಿಕತೆಯಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಒಕ್ಕೂಟವಾದ OPEC (Organization of the Petroleum Exporting Countries) ಮತ್ತು OPEC+ ನಿಂದ ಮೇ 2026 ರಿಂದ ಹೊರಬರುವುದಾಗಿ ಘೋಷಿಸಿದೆ. ಈ ನಿರ್ಧಾರವು ಅಂತರಾಷ್ಟ್ರೀಯ ತೈಲ ಮಾರುಕಟ್ಟೆ ಮತ್ತು ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ.➤ ಒಪೆಕ್ (OPEC) ಎಂಬುದು ಪೆಟ್ರೋಲಿಯಂ ರಫ್ತು ಮಾಡುವ ಪ್ರಮುಖ ರಾಷ್ಟ್ರಗಳ ಒಂದು ಪ್ರಭಾವಶಾಲಿ ಅಂತರ ಸರ್ಕಾರಿ ಸಂಸ್ಥೆಯಾಗಿದೆ. ಇದು 1960 ರಲ್ಲಿ ಬಾಗ್ದಾದ್ ಕಾನ್ಫರೆನ್ಸ್‌ನಲ್ಲಿ ಸ್ಥಾಪನೆಯಾಗಿದ್ದು, ಪ್ರಸ್ತುತ ಆಸ್ಟ್ರಿಯಾದ ವಿಯೆನ್ನಾದಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಗಳನ್ನು ಸ್ಥಿರವಾಗಿರಿಸುವುದು, ಸದಸ್ಯ ರಾಷ್ಟ್ರಗಳ ನಡುವೆ ಸಮನ್ವಯ ಸಾಧಿಸುವುದು ಮತ್ತು ತೈಲ ಉತ್ಪಾದಕರಿಗೆ ಸಮಂಜಸವಾದ ಲಾಭ ಹಾಗೂ ಗ್ರಾಹಕ ರಾಷ್ಟ್ರಗಳಿಗೆ ನಿಯಮಿತ ಪೂರೈಕೆಯನ್ನು ಖಚಿತಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇನ್ನು OPEC+ ಎಂಬುದು ಮೂಲ ಒಪೆಕ್ ಸದಸ್ಯರೊಂದಿಗೆ ರಷ್ಯಾ ಸೇರಿದಂತೆ ಇತರ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳು ಸೇರಿ ಮಾಡಿಕೊಂಡಿರುವ ವಿಸ್ತೃತ ಒಕ್ಕೂಟವಾಗಿದ್ದು, ಇದು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಿದೆ.➤ ಯುಎಇ (UAE) ಒಪೆಕ್ ಒಕ್ಕೂಟದಿಂದ ಹೊರಬರಲು ಪ್ರಮುಖವಾಗಿ ತನ್ನ ಆರ್ಥಿಕ ಸ್ವತಂತ್ರ ಮತ್ತು ತೈಲ ಉತ್ಪಾದನಾ ಸಾಮರ್ಥ್ಯದ ವಿಸ್ತರಣೆಯೇ ಕಾರಣವಾಗಿದೆ. ಯುಎಇ ತನ್ನ ತೈಲ ಉತ್ಪಾದನಾ ಸಾಮರ್ಥ್ಯವನ್ನು ದಿನಕ್ಕೆ 5 ಮಿಲಿಯನ್ ಬ್ಯಾರೆಲ್‌ಗಳಿಗೆ ಹೆಚ್ಚಿಸಲು ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ, ಆದರೆ ಒಪೆಕ್ ವಿಧಿಸಿರುವ ಮಿತಿಗಳಿಂದಾಗಿ (Production Quotas) ಆ ಸಂಪೂರ್ಣ ಸಾಮರ್ಥ್ಯವನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ, 'ವಿಷನ್ 2031' ರ ಅಡಿಯಲ್ಲಿ ತೈಲವಲ್ಲದ ಇತರ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಅದಕ್ಕೆ ಹೆಚ್ಚಿನ ಹಣಕಾಸಿನ ಅಗತ್ಯವಿದೆ. ಸೌದಿ ಅರೇಬಿಯಾದೊಂದಿಗೆ ಉತ್ಪಾದನಾ ಮಿತಿಯ ಕುರಿತಾದ ಭಿನ್ನಾಭಿಪ್ರಾಯಗಳು ಮತ್ತು ಇರಾನ್-ಇಸ್ರೇಲ್ ಸಂಘರ್ಷದಂತಹ ಭೌಗೋಳಿಕ ರಾಜಕೀಯ ಬದಲಾವಣೆಗಳು ಸಹ ಯುಎಇ ಈ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಿವೆ.➤ ಜಾಗತಿಕ ತೈಲ ಬೆಲೆಗಳ ಮೇಲೆ ಇದರ ಪರಿಣಾಮ:- ಬೆಲೆ ಇಳಿಕೆಯ ಸಾಧ್ಯತೆ: ಯುಎಇ ಒಕ್ಕೂಟದಿಂದ ಹೊರಬಂದು ಸ್ವತಂತ್ರವಾಗಿ ಹೆಚ್ಚಿನ ತೈಲ ಉತ್ಪಾದನೆ ಮಾಡಲು ಆರಂಭಿಸಿದರೆ, ಮಾರುಕಟ್ಟೆಯಲ್ಲಿ ತೈಲ ಪೂರೈಕೆ ಹೆಚ್ಚಾಗಿ ಬೆಲೆಗಳು ಇಳಿಕೆಯಾಗಬಹುದು.- ಒಪೆಕ್ ಪ್ರಭಾವ ಕುಸಿತ: ಈ ಹಿಂದೆ ಕತಾರ್ (2019) ಮತ್ತು ಅಂಗೋಲಾ (2024) ಒಪೆಕ್‌ನಿಂದ ಹೊರಬಂದಿದ್ದವು. ಈಗ ಯುಎಇ ನಿರ್ಗಮನವು ಈ ಒಕ್ಕೂಟದ ಏಕಸ್ವಾಮ್ಯವನ್ನು ದುರ್ಬಲಗೊಳಿಸಬಹುದು.➤ ಜಾಗತಿಕ ಮಾರುಕಟ್ಟೆಯಲ್ಲಿ ಯುಎಇ ಸ್ವತಂತ್ರವಾಗಿ ತೈಲ ಉತ್ಪಾದನೆಯನ್ನು ಹೆಚ್ಚಿಸುವುದರಿಂದ ಕಚ್ಚಾ ತೈಲದ ಬೆಲೆಗಳು ಇಳಿಕೆಯಾಗಿ ಭಾರತದ ಆಮದು ವೆಚ್ಚ ಭಾರಿ ಪ್ರಮಾಣದಲ್ಲಿ ತಗ್ಗಲಿದೆ, ಇದು ದೇಶದ ಆರ್ಥಿಕತೆಯಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಸಹಕಾರಿಯಾಗುವುದಲ್ಲದೆ, ಭಾರತದ ಆಪ್ತ ವ್ಯಾಪಾರ ಪಾಲುದಾರನಾದ ಯುಎಇನಿಂದ ನೇರ ಮತ್ತು ಸ್ಥಿರವಾದ ತೈಲ ಪೂರೈಕೆ ಖಚಿತವಾಗುವ ಮೂಲಕ ಇಂಧನ ಭದ್ರತೆ ಮತ್ತಷ್ಟು ಬಲಗೊಳ್ಳಲಿದೆ.